

ಎಚ್.ಡಿ.ಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಐಟಿಯು ನೇತೃತ್ವದಲ್ಲಿ ಅಹೋರಾತ್ರಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬಿಸಿಯೂಟ ನೌಕರರ ಸಂಘದ ತಾಲೂಕು ಸದಸ್ಯರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ. ಬಿಆರ್.ಅಂಬೇಡ್ಕರ್ ಸಮುದಾಯ ಭವನದಿಂದ ಹೊರಟ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ತಾಲೂಕು ಆಡಳಿತ ಆವರಣದಲ್ಲಿ ಸಮಾವೇಶಗೊಂಡರು.
ಸರ್ಕಾರ ಅಡುಗೆ ಮಾಡುವವರಿಗೆ 6,000 ರೂ. ಮತ್ತು ಸಹಾಯಕರಿಗೆ 5,000 ರೂ. ಗೌರವಧನ ಹೆಚ್ಚಿಸುವುದಾಗಿ ಹೇಳಿ ಹಲವು ವರ್ಷ ಕಳೆದರೂ ಬೇಡಿಕೆ ಈಡೇರಿಲ್ಲ. 25 ವರ್ಷಗಳಿಂದ ದುಡಿಯುತ್ತಿರುವ ಬಿಸಿಯೂಟ ನೌಕರರಿಗೆ ಯಾವುದೇ ಸಹಾಯಧನ ಅಥವಾ ಇಡುಗಂಟು ನೀಡದೆ ಬರಿಗೈಯಲ್ಲಿ ಮನೆಗೆ ಕಳುಹಿಸುತ್ತಿರುವುದು ಸರಿಯಲ್ಲ. ರಜೆ ಸಂದರ್ಭ ಹೆಚ್ಚುವರಿಯಾಗಿ ನೀಡಬೇಕಾಗಿದ್ದ ಗೌರವಧನವನ್ನೂ ನೀಡದಿರುವುದು ಸರ್ಕಾರದ ಜನ ವಿರೋಧಿ ನೀತಿಗೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷೆ ಮಂಗಳಮ್ಮ, ಕಾರ್ಯದರ್ಶಿ ಶಾಂತಿ, ಸರಗೂರು ಅಧ್ಯಕ್ಷೆ ನೀಲಮ್ಮ, ಖಜಾಂಚಿ ಲತಾ, ಸಿಪಿಎಂ ಶಿವಣ್ಣ ಸೇರಿದಂತೆ 200ಕ್ಕೂ ಹೆಚ್ಚು ನೌಕರರು ಹಾಜರಿದ್ದರು.