

ಗದಗ: ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದವರು ಸಿಎಂ ಆಗುತ್ತಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಸಿ. ಸಿ. ಪಾಟೀಲ್, ಜನರ ವಿಚಾರವನ್ನು ಬೇರೆಡೆ ಸೆಳೆಯುವ ಕಲೆಯನ್ನು ಎಚ್.ಡಿ.ಕೆ ಕರಗತ ಮಾಡಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಮೊದಲು ಹಾಸನದಲ್ಲಿ ಯಾರಿಗೆ ಟಿಕೆಟ್ ಕೊಡುಬೇಕು ಎಂಬುದರ ಬಗ್ಗೆ ವಿಚಾರ ಮಾಡಲಿ ಎಂದು ವ್ಯಂಗ್ಯವಾಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಹೇಳಿಕೆಗಳು ನೀಲಕೆಟ್ಟ ಸುದ್ದಿಗಳಿದ್ದಂತೆ. ಪ್ರಲ್ಹಾದ್ ಜೋಶಿ ಸಾಧನೆಗಳ ಮೂಲಕ ಬೆಳೆದಿದ್ದಾರೆ ಹೊರತು ಜಾತಿಯಿಂದಲ್ಲ ಎಂಬುದು ಮೊದಲು ಎಚ್ಡಿಕೆ ಅರಿತುಕೊಳ್ಳಲಿ. ಜಾತಿಯಿಂದ ಯಶಸ್ಸು ಕಾಣುವುದು ಜೆಡಿಎಸ್ ಪಕ್ಷದಲ್ಲಿ ವಿನಹ ಬಿಜೆಪಿಯಲ್ಲಿ ಅಲ್ಲ. ಬಿಜೆಪಿಯಲ್ಲಿ ಸಾಮರ್ಥ್ಯ ಇದ್ದರೆ ಮಾತ್ರ ಅವಕಾಶ. ಕುಟುಂಬ ರಾಜಕಾರಣ ಜೆಡಿಎಸ್ ನಲ್ಲಿ ಇದೆಯೇ ವಿನಹ ಬಿಜೆಪಿಯಲ್ಲಿಲ್ಲ. ನಮ್ಮ ಹೈಕಮಾಂಡ್ ಎನೆಂಬುದು ಅವರಿಒಗೂ ಗೊತ್ತು. ಅವರ ಹೇಳಿಕೆಗಳು ಸುಡುಗಾಡ ಸಿದ್ಧರ ಜೋಳಗಿ ಇದ್ದಂತೆ. ಬಹಳ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಎಂದು ಸಿ.ಸಿ. ಪಾಟೀಲ ಹೇಳಿದ್ದಾರೆ.
ಕುಂಕುಮ ಕಂಡರೆ ಭಯ:
ನಾನು ಹಿಂದುತ್ವದ ವಿರೋಧಿ ಅಲ್ಲ. ಮನುವಾದದ ವಿರೋಧಿ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಸಿ.ಸಿ. ಪಾಟೀಲ, ಕೇಸರಿ ಕಂಡರೆ, ಕುಂಕುಮ ಕಂಡರೆ ಭಯ ಆಗುತ್ತದೆ ಎಂದು ಇದೇ ಸಿದ್ದರಾಮಯ್ಯ ಹೇಳಿದ್ದರು. ಕೇಸರಿ, ಕುಂಕುಮ ಹಿಂದುತ್ವದ ಸಂಕೇತ. ಚುನಾವಣೆಯಲ್ಲಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸಿದ್ದರಾಮಯ್ಯ ವತಿರ್ಸುತ್ತಿದ್ದಾರೆ ಎಂದ ಅವರು ಕಾಂಗ್ರೆಸ್ 150 ಕ್ಷೇತ್ರ ಗೆದ್ದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಸವಾಲ್ ಹಾಕಿದರು.