

ಹಾಸನ: ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸುವ ಭರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ರಾಜಕೀಯ ನಾಯಕರು ಈ ರೀತಿ ಮಾತನಾಡುವುದು ಸರಿಯಲ್ಲ. ರಾಜಕೀಯ ಕಾರಣಕ್ಕಾಗಿ ಬಾಯಿಗೆ ಬಂದಂತೆ ಮಾತನಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನಾದರೂ ಪಾಠ ಕಲಿಯಬೇಕು ಎಂದರು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾರಾಚಂದನ್ ಅವರು ಮಾತನಾಡಿ, ವಿಧಾನಸಭೆಯಲ್ಲಿ ಕೇವಲ 19 ಸ್ಥಾನ ಗಳಿಸಿ ಹೀನಾಯ ಕುಸಿತ ಕಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಲೊಪ್ಪಿಕೊಂಡಿರುವ ಅವರು ಮಹಿಳೆಯರ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಇವರಿಗೆ ರಾಜ್ಯದ ಸ್ತ್ರೀಯರು ಪಾಠ ಕಲಿಸುತ್ತಾರೆ ಎಂದರು.
ಸರ್ವ ಜನಾಂಗದ ಏಳಿಗೆ ದೃಷ್ಟಿಯಿಂದ ರಾಜ್ಯ ಸರ್ಕಾರ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮೀ ಯೋಜನೆ ಮೂಲಕ ಅಭಿವೃದ್ಧಿ ಮಾಡುತ್ತಿದೆ. ಸರ್ಕಾರದ ಯೋಜನೆ ಪಡೆಯುವ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದರೆ ಏನರ್ಥ. ಹಾಗಾದರೆ ಶ್ರೀಮಂತ ಕುಟುಂಬದ ಮಹಿಳೆಯರೆಲ್ಲರೂ ಹಾದಿ ತಪ್ಪಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಅವರು ಮಾತನಾಡಿ, ಈ ರೀತಿಯ ಕೆಟ್ಟ ಹೇಳಿಕೆ ನೀಡುರುವುದು ರಾಜ್ಯಕ್ಕೆ ಅಪಮಾನವಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಕೇವಲ ಕ್ಷಮೆಯಾಚಿಸುವುದು ಮಾತ್ರವಲ್ಲ. ಮುಂದಿನ ದಿನಗಳಲ್ಲಿ ಮಾತನಡುವಾಗ ಎಚ್ಚರ ವಹಿಸಬೇಕೆಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ್, ಮಂಜುನಾಥ್ ಶರ್ಮಾ, ಗ್ರಾನೈಟ್ ರಾಜಶೇಖರ್, ಜಮೀಲಾ, ದಿನೇಶ್, ಪ್ರಕಾಶ್, ರಾಮಚಂದ್ರ, ರಘು ಇತರರು ಇದ್ದರು.