

ನವಲಗುಂದ: ಮುಖ್ಯಮಂತ್ರಿ ಕುರ್ಚಿ ಕಳೆದುಕೊಂಡ ಮೇಲೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದರು.
ಅಮರಗೋಳ ಗ್ರಾಮದ ಬೆಣ್ಣೆಹಳ್ಳದ ಬಳಿ ಅಳವಡಿಸಿದ ಏತ ನೀರಾವರಿ ಪಂಪ್ಹೌಸ್ ವೀಕ್ಷಣೆ, ಪ್ರವಾಹದ ಸಂತ್ರಸ್ತರಿಗೆ ಹೊನ್ನಾಳಿ ಕ್ಷೇತ್ರದಿಂದ ತಂದಿದ್ದ ಅಕ್ಕಿ ಪ್ಯಾಕೆಟ್, ಬಟ್ಟೆಯನ್ನು ಸೋಮವಾರ ವಿತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಬಿಜೆಪಿಯಿಂದ ಹೊರಬರಲು 15-30 ಶಾಸಕರು ತಯಾರಿದ್ದಾರೆ. ಆದರೆ, ನಾನು ಕೆಸರೊಳಗೆ ಹೋಗಲು ತಯಾರಿಲ್ಲ. ಸರ್ಕಾರ ಉರುಳಿಸೋ ನೀಚ ಕೆಲಸ ಮಾಡುವುದಿಲ್ಲ’ ಎಂದು ಕುಮಾರಸ್ವಾಮಿ ಹಾಸನದಲ್ಲಿ ನೀಡಿದ ಹೇಳಿಕೆಗೆ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂಬ ದುರುದ್ದೇಶದಿಂದ ಕಾಂಗ್ರೆಸ್ನೊಂದಿಗೆ ಸೇರಿ ಸರ್ಕಾರ ರಚಿಸಿದ್ದರು. ಸಿಎಂ ಕುರ್ಚಿ ಹೋದ ಬಳಿಕ ಕುಮಾರಸ್ವಾಮಿ ಅವರಿಗೆ ನೀರಿನಲ್ಲಿನ ಮೀನನ್ನು ಹೊರಗೆ ಬಿಟ್ಟಂತಾಗಿದೆ. ಜೆಡಿಎಸ್ ಮುಳುಗಿ ಹೋಗುತ್ತಿದೆ. ಆ ಪಕ್ಷಕ್ಕೆ ಯಾರಾದರೂ ಹೋಗುತ್ತಾರಾ ಎಂದು ಮರು ಪ್ರಶ್ನಿಸಿದರು. ಸಚಿವ ಸಂಪುಟ ವಿಸ್ತರಣೆ, ಡಿಸಿಎಂ ಹುದ್ದೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಸಂತ್ರಸ್ತರಿಗೆ ಅಕ್ಕಿ ವಿತರಣೆ: ಎಂ.ಪಿ. ರೇಣುಕಾಚಾರ್ಯ ಅವರು ಅಮರಗೋಳ ಗ್ರಾಮದಲ್ಲಿ ಏತ ನೀರಾವರಿ ವೀಕ್ಷಿಸಿದ ಬಳಿಕ ಹೊನ್ನಾಳಿ ಕ್ಷೇತ್ರದಿಂದ ತಂದಿದ್ದ ಎರಡು ಲಾರಿ ಅಕ್ಕಿ, ಸೀರೆ, ಬಟ್ಟೆಗಳನ್ನು ಬೆಣ್ಣೆಹಳ್ಳ ಪ್ರವಾಹ ಸಂತ್ರಸ್ತರಿಗೆ ವಿತರಿಸಿದರು.
‘ಮನೆ ಹಾನಿಗೊಳಗಾದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಬಿಡುಗಡೆಗೆ ಸೂಚಿಸಲಾಗುವುದು. 10 ಸಾವಿರ ಎಕರೆ ಭೂಮಿಗೆ ನೀರುಣಿಸುವ ಅಮರಗೋಳ ಏತ ನೀರಾವರಿ ಪಂಪ್ಹೌಸ್ ಸುಸಜ್ಜಿತ ಕಟ್ಟಡ ಹೊಂದಿದೆ. ಈ ಕಾರ್ಯದಲ್ಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಪರಿಶ್ರಮ ಮೆಚ್ಚುವಂಥದ್ದು ಎಂದು ರೇಣುಕಾಚಾರ್ಯ ಹೇಳಿದರು.