

ಎನ್.ಆರ್.ಪುರ: ಜೆಡಿಎಸ್ ಮುಖಂಡ ಎಚ್.ಟಿ.ರಾಜೇಂದ್ರ ಅವರು ಶೃಂಗೇರಿ ಕ್ಷೇತ್ರ ಕಂಡ ಪ್ರಾಮಾಣಿಕ ಹಾಗೂ ಮಹಾನ್ ವ್ಯಕ್ತಿ ಎಂದು ಕಸಾಪ ಪೂರ್ವಾಧ್ಯಕ್ಷ ಪಿ.ಕೆ.ಬಸವರಾಜ್ ಹೇಳಿದರು.
ಗುರುವಾರ ತಾಲೂಕು ಕಸಾಪ ಕಚೇರಿಯಲ್ಲಿ ಎಚ್.ಟಿ.ರಾಜೇಂದ್ರ ಅವರಿಗೆ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜೇಂದ್ರ ಅವರು ಜನಿಸುವಾಗ ಉಸಿರಿತ್ತು, ಸಾಯುವಾಗ ಹೆಸರಿತ್ತು. ಅವರ ನಡತೆ, ಆದರ್ಶ, ತತ್ವ, ಪ್ರಾಮಾಣಿಕತೆ ಅವರನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ. ಸಹೋದರನನ್ನು ಹೈಕೋರ್ಟ್ ನ್ಯಾಯಮೂರ್ತಿ ಮಾಡಬೇಕೆಂಬ ಕನಸ್ಸನ್ನು ನನಸಾಗಿದವರು. ರೈತ ಚಳವಳಿ, ರೈತ ಸಿದ್ಧಾಂತಗಳನ್ನು ಅಳವಡಿಸಿಕೊಂಡವರು ಎಂದರು.
1985ರಲ್ಲಿ ದೇವೇಗೌಡರ ನಾಯಕತ್ವದಲ್ಲಿ ಜನತಾ ಪಕ್ಷದಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಆದರೆ ಅಧಿಕಾರ ಸಿಗಲಿಲ್ಲ ಎಂದು ಎಂದಿಗೂ ಪಕ್ಷವನ್ನು ಬಿಟ್ಟವರಲ್ಲ. ಅವರು ಎಂದಿಗೂ ಅಂತಸ್ತಿಗೆ ಬೆಲೆಕೊಟ್ಟವರಲ್ಲ, ಬೇರೆಯವರ ಜ್ಞಾನ, ವ್ಯಕ್ತಿತ್ವಕ್ಕೆ ಬೆಲೆಕೊಟ್ಟವರು. ರಾಜಕೀಯ ಜೀವನದಲ್ಲಿ ಎಂದಿಗೂ ಬೇರೆಯವರ ತೇಜೋವಧೆ ಮಾಡಿದವರಲ್ಲ. ವಿಪಕ್ಷದವರೂ ಎಂದಿಗೂ ರಾಜೇಂದ್ರ ಅವರ ತೇಜೋವಧೆ ಮಾಡಿಲ್ಲ. ಚುನಾವಣೆಯಲ್ಲಿ ಡಿ.ಎನ್.ಜೀವರಾಜ್ ಎದುರು ಸೋತಿದ್ದರೂ ಜೀವರಾಜ್ ಅವರ ಅಭಿನಂದನಾ ಸಮಾರಂಭಕ್ಕೆ ಹೋಗಿ ಅಭಿನಂದನೆಯ ಮಾತುಗಳನ್ನಾಡಿದ್ದರು. ಇಂಥ ಒಳ್ಳೆಯ ಮನಸ್ಥಿತಿ ಅವರಲ್ಲಿತ್ತು ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ರಾಜೇಂದ್ರ ಅವರು ನಿಸ್ವಾರ್ಥ ವ್ಯಕ್ತಿತ್ವ ಹೊಂದಿದವರು. ವಿದೇಶಗಳಿಗೆ ಅನೇಕ ಬಾರಿ ಪ್ರವಾಸಮಾಡಿ ಅನೇಕ ಕ್ಷೇತ್ರಗಳ ಬಗ್ಗೆ ತಿಳಿದುಕೊಂಡಿದ್ದರು. ಅವರ ಕಳಂಕ ರಹಿತ ರಾಜಕಾರಣ ಬೇರೆ ರಾಜಕಾರಣಿಗಳಿಗೆ ಮಾದರಿ ಎಂದರು.
ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ಮಡಬೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಕಸಾಪಕ್ಕೆ ಎಚ್.ಟಿ.ರಾಜೇಂದ್ರ ಬೆಂಬಲವಾಗಿ ನಿಂತಿದ್ದರು ಎಂದು ಸ್ಮರಿಸಿದರು.
ಮೌನಾಚರಣೆ ಮಾಡಿ ಎಚ್.ಡಿ.ರಾಜೇಂದ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಾಗರಾಜ್ ಅಪ್ಪಾಜಿ, ಸಾಹಿತಿ ರವಿ ನಿಡಘಟ್ಟ ಅವರು ಎಚ್.ಟಿ.ರಾಜೇಂದ್ರ ಅವರ ಬಗ್ಗೆ ಬರೆದ ಕವನ ವಾಚನ ಮಾಡಿದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಉದಯ್‌ಗಿಲ್ಲಿ, ಕಸಾಪ ಯುವ ಘಟಕದ ಅಧ್ಯಕ್ಷ ಸತ್ಯಪ್ರಸಾದ್, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ಸಾಹಿತಿ ಜಯಮ್ಮ, ಮಧುಮಾಲತಿ, ಭಾನುಮತಿ, ಬಿ.ನಂಜುಂಡಪ್ಪ, ವಸಂತ, ಶಶಿಕಲಾ ನಾಗರಾಜ್, ಎಸ್.ಎಸ್.ಸಂತೋಷ್‌ಕುಮಾರ್ ಇದ್ದರು.