ಎಚ್.ಎನ್.ವ್ಯಾಲಿ ನೀರಿಗೆ ಕನ್ನ

21CBP3a
Published on

ಚಿಕ್ಕಬಳ್ಳಾಪುರ : ಸತತ ಬರಗಾಲ, ಅಂತರ್ಜಲಮಟ್ಟದ ತೀವ್ರ ಕುಸಿತದಿಂದ ತತ್ತರಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿರುವ ಹೆಬ್ಬಾಳ-ನಾಗವಾರ ವ್ಯಾಲಿಯ (ಕೆ.ಸಿ.ವ್ಯಾಲಿ) ತ್ಯಾಜ್ಯ ಸಂಸ್ಕರಿಸಿದ ನೀರಿಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿವೆ.

ನೀರಿನ ಅಭಾವದ ನಡುವೆ ಕೆರೆಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಕೆಲವರು ಅಕ್ರಮವಾಗಿ ಪಂಪ್ ಮೋಟಾರ್ ಅಳವಡಿಸಿ ಕೃಷಿ ಜಮೀನು ಮತ್ತು ಇತರ ಚಟುವಟಿಕೆಗೆ ರಾಜಾರೋಷವಾಗಿ ಬಳಸಿಕೊಳ್ಳುತ್ತಿದ್ದಾರೆ.

ಕಂಡಕನಹಳ್ಳಿ, ಗಾಂಡ್ಲಹೊಸಹಳ್ಳಿ, ಅಂಗರೇಖನಹಳ್ಳಿ, ದಿಬ್ಬೂರು, ಗುಡಿಹಳ್ಳಿ, ಕತ್ತಿರುಗುಪ್ಪೆ, ಅಡವಿಚಿಮ್ಮನಹಳ್ಳಿ ಸೇರಿ ಹಲವೆಡೆ ಎಚ್.ಎನ್.ವ್ಯಾಲಿ ನೀರಿಗೆ ಪಂಪ್ ಮೋಟಾರ್ ಅಳವಡಿಸಿ ನಿತ್ಯ ನೀರು ಹರಿಸಿಕೊಳ್ಳುತ್ತಿದ್ದಾರೆ.

ಪ್ರಭಾವಿಗಳೇ ನೀರು ಕಳವಿನಲ್ಲಿ ತೊಡಗಿದ್ದು ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಜಗ್ಗದೆ ರಾಜಕೀಯ ಪ್ರಭಾವದ ಮೂಲಕ ನುಣುಚಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಾಲಿ ನೀರಿಗೆ ಕನ್ನ ಹಾಕುತ್ತಿರುವವರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ರೈತರು, ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಸಲು 883.54 ಕೋಟಿ ರೂ. ವೆಚ್ಚದ ಎಚ್.ಎನ್.ವ್ಯಾಲಿ ಯೋಜನೆಗೆ 2017ರ ಸೆಪ್ಟೆಂಬರ್ 18ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. 2020ರ ಫೆ.6ರಿಂದ ಸಂಸ್ಕರಿದ ನೀರು ಪೂರೈಸಲಾಗುತ್ತಿದ್ದು, ಶಾಶ್ವತ ನೀರಾವರಿ ಮೂಲಗಳಿಲ್ಲದ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಲು ಯೋಜನೆ ಪೂರಕವಾಗಿದೆ.

ಸ್ಥಗಿತಗೊಂಡ ನೀರು : ಲಾಕ್‌ಡೌನ್, ನೀರಿನ ಅಭಾವ ಮತ್ತು ತಾಂತ್ರಿಕ ದೋಷದಿಂದ ಕಳೆದ 15 ತಿಂಗಳಿನಿಂದಲೂ ಎಚ್.ಎನ್.ವ್ಯಾಲಿ ಯೋಜನೆಯಡಿ ನೀರು ಪೂರೈಕೆಯನ್ನು ಹಲವು ಕೆರೆಗಳಿಗೆ ಬಾಕಿ ಉಳಿಸಲಾಗಿದೆ. ಯೋಜನೆಯಡಿ ಜಿಲ್ಲೆಯ 4 ತಾಲೂಕುಗಳ 44 ಕೆರೆಗಳಿಗೆ ವಾರ್ಷಿಕ 2.70 ಟಿಎಂಸಿ ನೀರು ಹರಿಸಬಹುದು. ಇದಕ್ಕೆ ಈಗಾಗಲೇ ಬರೋಬ್ಬರಿ 114 ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಚಿಕ್ಕಬಳ್ಳಾಪುರ ತಾಲೂಕಿನ ಕೆಲ ಕೆರೆಗಳಿಗೆ ನೀರು ಹರಿಸುವ ಪ್ರಕ್ರಿಯೆ ನಿಂತು ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net