ಎಕ್ಸಪ್ರೆಸ್ ರೈಲು ನಿಲುಗಡಗೆ ಮನವಿ

Appeal for express train stop
ಹುಬ್ಬಳ್ಳಿಯಲ್ಲಿ ನೈಋತ್ಯ ರೇಲ್ವೆ ಮಹಾಪ್ರಬಂಧಕರಿಗೆ ಇಂಡಿ ತಾಲೂಕು ಲಚ್ಯಾಣ ಗ್ರಾಮಸ್ಥರು ರೈಲು ನಿಲುಗಡೆ ಮನವಿ ಸಲ್ಲಿಸಿದರು. ನಂದಕುಮಾರ ಪಾಟೀಲ, ಪ್ರಾಚಾರ್ಯ ಎಸ್.ಎಂ. ಶೆಟ್ಟೆಣ್ಣವರ, ಪ್ರಾಚಾರ್ಯ ಪಿ.ಬಿ. ಉಪ್ಪಾರ ಇದ್ದರು.
Published on

ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ ರೈಲು ನಿಲ್ದಾಣದಲ್ಲಿ ಗೋಲಗುಂಬಜ್ ಎಕ್ಸಪ್ರೆಸ್ ರೈಲು ನಿಲುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ನೈಋತ್ಯ ರೇಲ್ವೆ ಮಹಾ ಪ್ರಬಂಧಕರಿಗೆ ಲಚ್ಯಾಣ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿದರು.

ಲಚ್ಯಾಣ ಗ್ರಾಮವು ಶಿಕ್ಷಣ ಕಾಶಿ ಎಂದೇ ಪ್ರಸಿದ್ಧವಾಗಿದೆ. ಮಹಾಪುರುಷ ಸಿದ್ಧಲಿಂಗ ಮಹಾರಾಜರ ಪ್ರಸಿದ್ಧ ಮಠವಿದೆ. ನಿತ್ಯ ಈ ಮಠಕ್ಕೆ ಮಹಾರಾಷ್ಟ್ರದ ಪುಣೆ, ಮುಂಬಯಿ, ಹೈದ್ರಾಬಾದ್, ಹುಬ್ಬಳ್ಳಿವರೆಗಿನ ನೂರಾರು ಭಕ್ತರು ದರ್ಶನ ಪಡೆಯಲು ಬರುತ್ತಾರೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಡಿಇಡಿ, ಪದವಿಪೂರ್ವ, ಐಟಿಐ ಕಾಲೇಜು ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳಿದ್ದು, ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ನಿತ್ಯ ವ್ಯಾಸಂಗಕ್ಕೆ ಬರುತ್ತಾರೆ.

15 ಸಾವಿರ ಜನಸಂಖ್ಯೆಯುಳ್ಳ ದೊಡ್ಡ ಗ್ರಾಮವಾಗಿದ್ದು, ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದೆ. ಮೀಟರ್ ಗೇಜ್ ಇದ್ದ ಸಂದರ್ಭದಲ್ಲಿ ಎಲ್ಲ ಎಕ್ಸ್‌ಪ್ರೆಸ್ ರೈಲುಗಳು ಲಚ್ಯಾಣ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದವು. ಆದರೆ ಗೇಜ್ ಪರಿವರ್ತನೆಯ ನಂತರ ನಿಲುಗಡೆಯನ್ನು ರೇಲ್ವೆ ಇಲಾಖೆ ನಿಲ್ಲಿಸಿದೆ. ಕಾರಣ ಗೋಲಗುಂಬಜ್ ಎಕ್ಸ್‌ಪ್ರೆಸ್ ಸೇರಿದಂತೆ ಇನ್ನೂ ಕೆಲವು ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ನಿಗದಿತ ಸಮಯಕ್ಕೆ ರೈಲುಗಳನ್ನು ಓಡಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ರೇಲ್ವೆ ಅಭಿವೃದ್ಧಿ ಸಮಿತಿಯ ಹುಬ್ಬಳ್ಳಿ ತಾಲೂಕು ಘಟಕದ ಅಧ್ಯಕ್ಷ ನಂದಕುಮಾರ ಪಾಟೀಲ, ಪ್ರಾಚಾರ್ಯ ಎಸ್.ಎಂ. ಶೆಟ್ಟೆಣ್ಣವರ, ಪ್ರಾಚಾರ್ಯ ಪಿ.ಬಿ. ಉಪ್ಪಾರ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net