ಎಕರೆಗೆ ₹ 50 ಸಾವಿರ ಪರಿಹಾರ ಕೊಡಿ

rait sang
Published on

ಬೀದರ್: ಅತಿವೃಷ್ಟಿಯಿಂದ ಜಿಲ್ಲೆಯ ರೈತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಿ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಜಿಲ್ಲಾ ರೈತ ಸಂಘ (ಕೋಡಿಹಳ್ಳಿ ಬಣ) ಆಗ್ರಹಿಸಿದೆ.

ಸಂಘದ ಪ್ರಮುಖರು ಇಲ್ಲಿನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅತಿವೃಷ್ಟಿಯಿಂದ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದೆ. ಸೋಯಾಬಿನ್, ತೊಗರಿ, ಕಬ್ಬು ಸೇರಿ ಬಹುತೇಕ ಬೆಳೆಗಳು ನೀರುಪಾಲಾಗಿವೆ. ರೈತರ ಬದುಕು ಬೀದಿಗೆ ಬಿದ್ದಿದ್ದು, ತಕ್ಷಣವೇ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್ಸೆಸ್ಕೆಯನ್ನು ಸರ್ಕಾರದ ಸುಪರ್ದಿಗೆ ಪಡೆದು ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವಿಕೆ ಆರಂಭಿಸಬೇಕು. ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿ 2019-20 ಹಾಗೂ 2020-21ನೇ ಸಾಲಿನ ವಿಮೆ ಹಣ ವಾರದಲ್ಲಿ ರೈತರ ಖಾತೆಗೆ ಜಮೆ ಮಾಡಬೇಕು. ಬೆಳೆ ಹಾನಿ ಬಗ್ಗೆ ಸಮೀಕ್ಷೆ ಬೇಗ ಮುಗಿಸಿ ಪರಿಹಾರ ಒದಗಿಸಬೇಕು. ವಾರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಬೇಡಿಕೆ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net