

ಔರಾದ್: ಭಾರಿ ಮಳೆಯಿಂದ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು, ಎಕರೆಗೆ ೨೫ ಸಾವಿರ ರೂ. ಪರಿಹಾರವನ್ನು ಸರ್ಕಾರ ಘೋಷಿಸಬೇಕೆಂದು ಶಾಸಕ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ.
ಔರಾದ್ ಹಾಗೂ ಕಮಲಗನರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಸಂಚರಿಸಿ ಮಳೆಯಿಂದಾದ ಹಾನಿ ಪರಿಶೀಲಿಸಿ ಮಾತನಾಡಿದ ಅವರು, ಔರಾದ್ ಕ್ಷೇತ್ರದಲ್ಲಿ ೧೦ ಸಾವಿರ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿಯಾಗಿದೆ. ಮಳೆ ನೀರಿನ ವಿಪರೀತ ಹರಿವಿನಿಂದಾಗಿ ಸೇತುವೆ ಒಡೆದಿದ್ದು, ನೀರು ಹೊಲಗಳಿಗೆ ನುಗ್ಗಿ ವಿವಿಧ ಬೆಳೆಗಳು ನೀರುಪಾಲಾಗಿವೆ. ಸೋಯಾ, ಉದ್ದು, ಹೆಸರು ಮತ್ತಿತರ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದರೂ ಧಾರಾಕಾರ ಮಳೆಗೆ ಕೊಚ್ಚಿ ಹೋಗಿವೆ ಎಂದರು.
ಒಂದೇ ದಿನ ೩೦೦ ಎಂಎಂ ಮಳೆಯಾಗಿದ್ದರಿಂದ ನೀರಿನ ರಭಸಕ್ಕೆ ಕೆರೆ-ಕಟ್ಟೆ, ಸೇತುವೆಗಳು ಒಡೆದು ತೀವ್ರ ಹಾನಿಯಾಗಿದೆ. ಕಾಲುವೆಗಳ ನೀರು ಕೃಷಿ ಭೂಮಿಗಳಿಗೆ ನುಗ್ಗಿ ಬಹಳಷ್ಟು ನಷ್ಟವಾಗಿದೆ. ಜನ-ಜಾನುವಾರುಗಳ ಸಾವಿಗೆ ಕೂಡಲೇ ಪರಿಹಾರ ವಿತರಿಸಲು ಕ್ರಮ ವಹಿಸಬೇಕು. ಹಾನಿಯಾಗಿರುವ ರಸ್ತೆ, ಕೆರೆ-ಕಟ್ಟೆ ಮತ್ತು ಸೇತುವೆಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಬಂಧಿತರಿಗೆ ಸೂಚಿಸಿದರು.
ಬೆಳೆವಿಮೆ ಮಾಡಿಸಿರುವ ಕ್ಷೇತ್ರದ ಎಲ್ಲ ರೈತರಿಗೆ ಲಾಭವಾಗುವ ದಿಸೆಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಸಮೀಕ್ಷೆಗೆ ಹೋಗುವ ಮುನ್ನ ಗ್ರಾಮದಲ್ಲಿ ಡಂಗೂರ ಸಾರಬೇಕು. ಸಮೀಕ್ಷೆಯಿಂದ ಯಾವೊಂದು ಕೃಷಿ ಭೂಮಿ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಬೆಳೆ ವಿಮೆ ವಿಷಯದಲ್ಲಿ ರೈತರಿಗೆ ಸಾಕಷ್ಟು ಅನ್ಯಾಯ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಾರಿ ಅತಿವೃಷ್ಟಿಯಿಂದ ರೈತರು ತೀವ್ರ ತೊಂದರೆಯಲ್ಲಿದ್ದು, ವಿಮೆಯ ಲಾಭ ಸಿಗಬೇಕು ಎಂದರು.
ಔರಾದ್ ತಹಸೀಲ್ದಾರ್ ಮಹೇಶ ಪಾಟೀಲ್, ಕಮಲನಗರ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒಗಳಾದ ಕಿರಣ ಪಾಟೀಲ್, ಹಣಮಂತರಾಯ ಕೌಟಗೆ, ಪಂಚಾಯತ್ ರಾಜ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಲೋಕೋಪಯೋಗಿ ಎಇಇ ಪ್ರೇಮಸಾಗರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮಾರುತಿ ರಾಠೋಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಈಮಲಪ್ಪ, ಬಿಇಒ ಬಿ.ಜೆ. ರಂಗೇಶ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ್, ಸತೀಶ್ ಪಾಟೀಲ್, ಯೋಗೇಶ್ ಪಾಟೀಲ್, ಧೊಂಡಿಬಾ ನರೋಟೆ, ಪ್ರವೀಣ ಕಾರಬಾರಿ, ಭರತ ಕದಂ, ಮಂಜು ಸ್ವಾಮಿ, ಸಚಿನ್ ರಾಠೋಡ್, ಸುಜಿತ ರಾಠೋಡ್, ಪ್ರದೀಪ್ ಪವಾರ್, ಧನಾಜಿ ರಾಠೋಡ್, ಸಂಜು ಮುರ್ಕೆ ಇತರರಿದ್ದರು.
ನಾಮಾನಾಯಕ್ ತಾಂಡಾ, ಬಾವಲಗಾಂವ, ಚೊಂಡಿಮುಖೇಡ, ಚಿಕ್ಲಿ(ಯು) ತಾಂಡಾ, ಅಕನಾಪುರ, ಗಂಗನಬೀಡ, ದಾಬಕಾ, ಮುತಖೇಡ, ನಂದಿ ಬಿಜಲಗಾಂವ, ಚಿಮ್ಮೇಗಾಂವ ಸೇರಿ ವಿವಿಧ ಗ್ರಾಮಗಳಲ್ಲಿ ಚವ್ಹಾಣ್ ಸಂಚರಿಸಿ ಕೆರೆ-ಕಟ್ಟೆ, ಸೇತುವೆ ಒಡೆದು ಉಂಟಾಗಿರುವ ಹಾನಿಯ ಮಾಹಿತಿ ಪಡೆದರು.