

ಹೊಳೆನರಸೀಪುರ: ಬಂಜರು ಭೂಮಿ ಹದಗೊಳಿಸಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ ಹೊಳೆನರಸೀಪುರ ತಾಲೂಕು ಬಂಟರತಳಲು ಗ್ರಾಮದ ಪ್ರಗತಿಪರ ರೈತ ಮಹಿಳೆ ಎಂ ಕವಿತಾ ಶಿವರಾಮೇಗೌಡ.
ಕೃಷಿ ಚಟುವಟಿಕೆಯ ಗಂಧವೇ ಗೊತ್ತಿಲ್ಲದ ಕವಿತಾ ತಮ್ಮ ಮಾವನ ಒತ್ತಾಯದ ಮೇರೆಗೆ ಕೃಷಿ ಕಾರ್ಯಗಳಲ್ಲಿ ತೊಡಗುವ ನಿರ್ಧಾರ ಮಾಡುತ್ತಾರೆ. ಅದರಂತೆ ಬೆಟ್ಟದ ತಪ್ಪಲಿನಲ್ಲಿರುವ ತಮ್ಮ ಬಂಜರು ಭೂಮಿಯನ್ನು ಸುಮಾರು ಐದು ಲಕ್ಷ ರೂ. ವೆಚ್ಚ ಮಾಡಿ ಹದಗೊಳಿಸುತ್ತಾರೆ. ಕೊಳವೆಬಾವಿ ತೋಡಿಸಿ ಪ್ರಾರಂಭದಲ್ಲಿ ತಮ್ಮ ನಾಲ್ಕು ಎಕರೆ ಕೃಷಿ ಜಮೀನಿಗೆ ತೆಂಗು ನೆಟ್ಟು ಜೊತೆಯಲ್ಲಿ ಕಬ್ಬು ಬೆಳೆದು ನಷ್ಟ ಅನುಭವಿಸುತ್ತಾರೆ. ಬೇಸಾಯದಿಂದ ಪೆಟ್ಟು ತಿಂದ ಇವರು ಹೈನುಗಾರಿಕೆಯತ್ತ ಗಮನಹರಿಸಿ ಹತ್ತು ಹಸುಗಳನ್ನು ಸಾಗಾಣಿಕೆ ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕುವ ಮೂಲಕ ಆದಾಯ ಗಳಿಸುತ್ತಾರೆ.
ಹೀಗೆ ಮುಂದುವರಿದು ತಮ್ಮ ಜಮೀನಿನಲ್ಲಿ ಪುಟ್ಟ ಮನೆ ಮಾಡಿ ಹಸುಗಳಿಗೆ ಪ್ರತ್ಯೇಕ ಶೆಡ್ ನಿರ್ಮಿಸಿ ಕಾಯಕ ಮುಂದುವರಿಸಿ ಬೇಸಾಯಕ್ಕೆ ತೊಡಗಿಸಿಕೊಳ್ಳುತ್ತಾರೆ. ನಾಲ್ಕು ಎಕರೆ ಜಮೀನಿನಲ್ಲಿ ಕಳೆದ ಐದು ವರ್ಷಗಳಿಂದ ಬಾಳೆ, ತೆಂಗು, ಅಡಿಕೆ, ಸೀಮೆ ಬದನೆ, ಮೆಣಸಿನಗಿಡ, ಬಟರ್ ಫ್ರೂಟ್, ಅಂಜೂರ, ದಾಳಿಂಬೆ, ಪಪ್ಪಾಯ, ನುಗ್ಗೆ ಬೆಳೆಯುತ್ತಿದ್ದಾರೆ. ಹಸು ಸಾಕಾಣಿಕೆ, ನಾಟಿ ಕೋಳಿ, ಕುರಿ ಸಾಕಾಣಿಕೆ ಮಾಡುವ ಮೂಲಕ ಯಶಸ್ಸು ಕಂಡಿದ್ದಾರೆ.
ನಷ್ಟದಿಂದ ಲಾಭದತ್ತ:
ಪ್ರಾರಂಭದಲ್ಲಿ ಒಂದೇ ಬೆಳೆ ಬೆಳೆದು ನಷ್ಟ ಅನುಭವಿಸಿ, ನಂತರ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಮೂಲಕ ನೀರುಣಿಸುತ್ತಿದ್ದಾರೆ. ಪ್ರಸ್ತುತ ಅವರ ಜಮೀನಿನಲ್ಲಿ 180 ತೆಂಗಿನ ಗಿಡ, 700 ಅಡಿಕೆ ಗಿಡ ಹಾಗೂ 125 ತೇಗ, ಸಿಲ್ವರ್ ಮರಗಳಿವೆ. ಕವಿತಾ ಅವರಿಗೆ ಕೃಷಿ ಚಟುವಟಿಕೆಯಲ್ಲಿ ಪತಿ ಶಿವರಾಮೇಗೌಡ ಬೆಂಬಲವಾಗಿ ನಿಂತು ಸಹಕರಿಸುತ್ತಿದ್ದಾರೆ. ಸೇವಂತಿಗೆ ಹೂವು ಬೆಳೆಯುತ್ತಾರೆ. ಪ್ರಸಕ್ತ ಸಾಲಿನಲ್ಲಿ ಬದನೆ ಹಾಗೂ ಮೆಣಸಿನ ಕಾಯಿ ಬೆಳೆದು ಸೈ ಅನಿಸಿಕೊಂಡಿದ್ದಾರೆ. ಎರಡು ಎಕರೆ ಭೂಮಿ ಮಳೆಯಾಧಾರಿತ ಪ್ರದೇಶವಾಗಿದ್ದು ರಾಗಿ, ದ್ವಿದಳ ಧಾನ್ಯ ಬೆಳೆದುಕೊಳ್ಳುತ್ತಾರೆ. ಒಟ್ಟಾರೆ ಆರು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿ ಲಾಭ ಜೊತೆಗೆ ತೃಪ್ತಿಕರ ಜೀವನ ಸಾಗಿಸುತ್ತಿದ್ದಾರೆ.
ಚೀಲಕ್ಕೆ ಸುಮಾರು 300 ರೂ.ನಂತೆ ವಾರಕ್ಕೆ 18 ಚೀಲ ಬದನೆ ಮಾರಾಟ ಮಾಡುತ್ತಾರೆ. 10 ಕೆ.ಜಿ.ಗೆ 400 ರೂ.ಗಳಂತೆ ವಾರಕ್ಕೆ ಒಂದು ಕ್ವಿಂಟಾಲ್ ಮೆಣಸಿಕನಕಾಯಿ ಮಾರುತ್ತಾರೆ. 3000 ಬಾಳೆ ಬೆಳೆದು ತಾವೇ ಬಾಳೆ ಹಣ್ಣು ಹಾಗೂ ಬಾಳೆ ಎಲೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಐದು ಹಸುಗಳಿಂದ ದಿನಕ್ಕೆ ನೂರು ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಮಾಸಿಕ ಖರ್ಚು ಕಳೆದು ಸುಮಾರು 50 ಸಾವಿರ ರೂ.ವರೆಗೆ ಲಾಭ ಮಾಡುತ್ತಿದ್ದಾರೆ. ಹಾಗೆಯೇ ಕುರಿ ಮತ್ತು ನಾಟಿಕೋಳಿ ಸಾಕಾಣಿಕೆಯಿಂದಲೂ ಆದಾಯ ಗಳಿಕೆ ಇದೆ. ತೋಟದಲ್ಲಿ 180 ನಾಟಿ ಕೋಳಿಗಳಿದ್ದು, ಮೊಟ್ಟೆಯನ್ನು ಒಂದಕ್ಕೆ 15 ರೂ.ಗಳಂತೆ ಮಾರಾಟ ಮಾಡುತ್ತಾರೆ.
ಫುಡ್ ಕ್ಯಾಟರಿಂಗ್:
ಬೇಸಾಯದ ಜೊತೆಯಲ್ಲೇ ಫುಡ್ ಕ್ಯಾಟರಿಂಗ್ ಕೂಡ ನಡೆಸುತ್ತಾರೆ. ಮೊದಲೇ ಆರ್ಡರ್ ಕೊಟ್ಟವರಿಗೆ ನಾಟಿ ಕೋಳಿ ಸಾಂಬಾರು, ಮುದ್ದೆ, ರೊಟ್ಟಿ ಮಾಡಿಕೊಡುತ್ತಾರೆ. ತಮ್ಮ ತೋಟದಲ್ಲೇ ಊಟದ ವ್ಯವಸ್ಥೆ ಕೂಡ ಮಾಡಿಕೊಡುತ್ತಾರೆ. ರೊಟ್ಟಿ, ರಾಗಿ ಲಡ್ಡು, ರಾಗಿ ಹಪ್ಪಳ, ರಾಗಿ ಚುರುಮುರಿ, ಉಪ್ಪಿನಕಾಯಿ, ಒಬ್ಬಟ್ಟು ತಯಾರಿಸಿ ತಾವೇ ಮಾಡಿಕೊಂಡಿರುವ ‘ಅಕ್ಷಯ ಸಿರಿ’ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಾರೆ.
ಸಾವಯವ ಕೃಷಿ:
ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುವ ಕೃಷಿ ಮೇಳಗಳು ಹಾಗೂ ಕೃಷಿ ಮಹಾವಿದ್ಯಾಲಯದಲ್ಲಿ ನಡೆಯುವ ಕೃಷಿ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಾರೆ. ರಾಸಾಯನಿಕ ಗೊಬ್ಬರ ಬಳಸದೆ ಜಾನುವಾರು ಹಾಗೂ ಕುರಿಗಳ ಗೊಬ್ಬರ ಮಾತ್ರ ಹಾಕಿ ಸಾವಯವ ಕೃಷಿ ನಡೆಸುತ್ತಿದ್ದಾರೆ. ಜೊತೆಗೆ ಎರೆಹುಳು ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಾರೆ. ಗಿಡಗಳು ಆರೋಗ್ಯದಿಂದಿರಲು ಜೀವಾಮೃತ ಉಣಬಡಿಸುತ್ತಾರೆ. ಸ್ವತಃ ತಾವೇ ತಯಾರಿಸಿದ ಆಹಾರ ಪದಾರ್ಥಗಳು ಹಾಗೂ ಬೆಳೆದ ಹಣ್ಣುಗಳನ್ನು ಕೃಷಿ ಮೇಳದಲ್ಲಿ ಮಾರಾಟ ಮಾಡಿ ಆದಾಯ ಗಳಿಸುತ್ತಾರೆ.
ಅರಸಿ ಬಂದ ಪ್ರಶಸ್ತಿಗಳು:
ಇವರ ಮಾದರಿ ಕೃಷಿ ಕಾರ್ಯಗಳನ್ನು ಕಂಡು ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ಅರಸಿ ಬಂದಿವೆ. ಕೃಷಿ ಕಾಲೇಜಿಗಳಿಂದಲೂ ಕೂಡ ಅತ್ಯುತ್ತಮ ಸಾಧಕ ಮಹಿಳೆ ಪ್ರಶಸ್ತಿಗಳು ಲಭಿಸಿವೆ. ಹಾಸನ ಆಕಾಶವಾಣಿಯಲ್ಲಿ ಭಾಗವಹಿಸಿ ಕೃಷಿ ಮಾಹಿತಿ ನೀಡಿದ್ದಾರೆ. ಕೇರಳ ರಾಜ್ಯಕ್ಕೂ ಕೂಡ ತೆರಳಿ ಶಾಖಾಹಾರದ ಅಡುಗೆ ಮಾಡುವ ಮೂಲಕ ಪ್ರಶಸ್ತಿ ಪಡೆದಿದ್ದಾರೆ.
ಮಗನಿಗೆ ಮನೆಯಲ್ಲೇ ಸಂಬಳದ ಉದ್ಯೋಗ:
ತಾವು ನಡೆಸುತ್ತಿರುವ ಮಿಶ್ರಬೆಳೆ ಕೃಷಿಗೆ ವಾರ್ಷಿಕ 4 ಲಕ್ಷ ರೂ. ಖರ್ಚು ಮಾಡುವ ಎಂ. ಕವಿತಾ ಅವರು ವಾರ್ಷಿಕ 10 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಪದವಿ ಶಿಕ್ಷಣ ಪಡೆದಿರುವ ತಮ್ಮ ಪುತ್ರನನ್ನು ದುಡಿಮೆಗಾಗಿ ಹೊರಗೆ ಕಳುಹಿಸದೆ ತಾವೇ ಸಂಬಳ ನೀಡುವ ಮೂಲಕ ಸಹಾಯಕ್ಕಾಗಿ ಜೊತೆಯಲ್ಲೇ ಇಟ್ಟುಕೊಂಡಿರುವುದು ವಿಶೇಷ.
ನಮ್ಮ ರೈತ ಬಾಂಧವರು ವ್ಯವಸಾಯದಿಂದ ಲಾಭ ಇಲ್ಲ ಎಂದು ಹಿಂಜರಿಯಬಾರದು. ಧೈರ್ಯದಿಂದ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಮುನ್ನಡೆಯಬೇಕು ಎಂಬುದು ಕವಿತಾ ಅವರ ಸಲಹೆ.
ರೈತರು ಬೆಳೆಯುವ ಬೆಳೆಗಳಿಗೆ ಸರ್ಕಾರದಿಂದ ನಿಗದಿತ ಬೆಲೆ ನಿರ್ಧಾರವಾಗಬೇಕು. ಬೆಳೆಗಳಿಗೆ ಮೊದಲೇ ಬೆಲೆ ನಿರ್ಧಾರವಾದರೆ ಬೆಳೆಯಲು ಉತ್ಸಾಹ ಬರುತ್ತದೆ ಎಂಬುದು ಅವರ ಒತ್ತಾಯ.