ಎಐಸಿಸಿ ಅಧ್ಯಕ್ಷಗಿರಿ ರಾಹುಲ್ ಗಾಂಧಿಗೆ ನೀಡಿ

K H muniyappa
Published on

ಕೋಲಾರ: ಕೇಂದ್ರದ ವಿರುದ್ಧ ಗಟ್ಟಿ ಹೋರಾಟ ಮಾಡಲು ತ್ವರಿತಗತಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಆಧ್ಯಕ್ಷ ಸ್ಥಾನ ನೀಡಿ ನಂತರ ಸಾಂಸ್ಥಿಕ ಚುನಾವಣೆ ನಡೆಸಬೇಕೆಂದು ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಮಂಗಳವಾರ ಭೇಟಿ ಮಾಡಿ ಒತ್ತಾಯಿಸಿರುವುದಾಗಿ ಎಐಸಿಸಿ ಆಹ್ವಾನಿತ ಸದಸ್ಯ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಈ ಕುರಿತು ಹೇಳಿಕೆ ನೀಡಿ, ರಾಷ್ಟ್ರದಲ್ಲಿ ಬಿಜೆಪಿ ರೈತರ ವಿರುದ್ಧ ಕಾನೂನು, ಕಾರ್ಯಕ್ರಮ ತಂದು ಇಲ್ಲದ ಕಷ್ಟ ಕೊಡುತ್ತಿದೆ. ಉತ್ತರ ಪ್ರದೇಶದ ದುರಂತ ಕಂಡಾಗ ಜನರಿಗೆ ರಕ್ಷಣೆ ಇಲ್ಲ ಎಂದು ಗೊತ್ತಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಬೇಕು, ಇದರೊಂದಿಗೆ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕಿದೆ ಎಂದರು.

ಕೇಂದ್ರ ಸರ್ಕಾರ ಕೆಲವೇ ದೊಡ್ಡ ವ್ಯಾಪಾರಸ್ಥರಿಗೆ ದೇಶ ಮಾರಾಟ ಮಾಡಲು ಹೊರಟಿದೆ. ಇದರ ವಿರುದ್ಧ ಹೋರಾಟಕ್ಕೆ ರಾಹುಲ್ ಗಾಂಧಿ ಅಧಿಕಾರ ತೆಗೆದುಕೊಳ್ಳಬೇಕು ಎಂದು ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸುವ ಜತೆಗೆ ಜವಾಬ್ದಾರಿ ತೆಗೆದುಕೊಳ್ಳುವಂತೆ ರಾಹುಲ್ ಗಾಂಧಿಯನ್ನೂ ಮನವಿ ಮಾಡಿದ್ದಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಬರೀ ಮನೆಗೆ ಬೀಗದ ಕೈ ಕೊಟ್ಟು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ನಡೆಸಲು ಹೇಳಿದ್ದಾರೆ ಎಂದು ಲೇವಡಿ ಮಾಡಿರುವ ಅವರು, ಬೊಮ್ಮಾಯಿ ಒಳ್ಳೆಯವರು. ಆದರೆ ಅವರು ಏನೂ ಮಾಡಲು ಆಗಲ್ಲ. ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ತರಲು ಒಗ್ಗಟ್ಟಾಗಿ ಕೆಲಸ ಮಾಡಲು ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net