ಮೈಸೂರು: ಮಾನವ ಸಂಪನ್ಮೂಲವನ್ನು ಪೂರ್ಣವಾಗಿ ಬಿಟ್ಟು ಎಐನಿಂದಲೇ ಯಾವುದೇ ಕಂಪನಿ ನಿರ್ವಹಿಸುವುದು ಈಗಂತೂ ಸಾಧ್ಯ ಇಲ್ಲ ಎಂದು ಇಂಟರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇನ್ ಫಾರ್ಮೇಷನ್ ಟೆಕ್ನಾಲಜಿಯ ಡೀನ್ ಡಾ.ಶ್ರೀನಾಥ ಶ್ರೀನಿವಾಸ ಹೇಳಿದರು.
ಮಾನಸಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಮತ್ತು ಗಣಕ ವಿಜ್ಞಾನ ಅಧ್ಯಯನ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಕಥೆ ಹೇಳುವಿಕೆ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಜಾಗತಿಕ ಅಭಿವ್ಯಕ್ತಿ ಮಥನದ ಕಾಲದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಪ್ರತಿ ಮನುಷ್ಯನೂ ತನ್ನನ್ನು ಮತ್ತಷ್ಟು ಅಭಿವ್ಯಕ್ತಿಸಿಕೊಳ್ಳಲು ಸಾಧ್ಯವಾಗುತ್ತದೆ. ಸುಳ್ಳು, ಸತ್ಯ, ಭ್ರಮೆಗಳೆಲ್ಲ ಮಸೆದು ಕೊನೆಗೊಮ್ಮೆ ಸತ್ಯ ಪ್ರಕಟಗೊಂಡಿತೆ ಎಂದು ನೋಡುವುದು ಈ ತಂತ್ರಜ್ಞಾನಾಧಿಪತ್ಯದ ತುದಿಯಲ್ಲಿ ಕುಳಿತವರ ತತ್ವಚಿಂತನೆಯಾಗಿದೆ ಎಂದರು.
ಎಐ ತಂತ್ರಜ್ಞಾನದಿಂದಲೇ ಎಲ್ಲವನ್ನು ಮಾಡಬಹುದು ಎನ್ನಲಾಗುತ್ತಿದೆ. ಆದರೆ ಮಾನವ ಸಂಪನ್ಮೂಲವನ್ನು ಪೂರ್ಣವಾಗಿ ಬಿಟ್ಟು ಎಐನಿಂದಲೇ ಯಾವುದೇ ಕಂಪನಿ ನಿರ್ವಹಿಸುವುದು ಸಾಧ್ಯವಿಲ್ಲ ಎನ್ನುವುದನ್ನು ತಿಳಿಯಬೇಕು ಎಂದು ಹೇಳಿದರು.
ಮನುಷ್ಯನ ಆಂಗಿಕ ಕ್ರಿಯೆಯನ್ನು ಉಪಕರಣಗಳ ಮೂಲಕ ಮಾಡುವಂತಾದರೆ, ಮನುಷ್ಯನ ಮೆದುಳನ್ನು ಮತ್ತು ಅದು ಮಾಡುವ ಕೆಲಸವನ್ನೂ ನಾವು ಕೃತಕವಾಗಿ ವಿನ್ಯಾಸಗೊಳಿಸಬಹುದೇ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಅನೇಕ ವರ್ಷಗಳಿಂದ ಕಾಡಿದೆ. ಇದರ ಮೂಲ ಆಶಯವನ್ನು ಬೇರೆ ಬೇರೆ ನಾಗರಿಕತೆಗಳ ವಿಜ್ಞಾನದ ಇತಿಹಾಸದಲ್ಲಿ ಗುರುತಿಸಬಹುದಾದರೂ, ಅದಕ್ಕೆ ಒಂದು ಸ್ಪಷ್ಟ ರೂಪ ಸಿಕ್ಕಿದ್ದು 1950 ರಿಂದ ಈಚೆಗೆ ಎಂದರು.
ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸಬಹುದಾದರೂ ಎಐಗೆ ಸಂಬಂಧಿಸಿದಂತೆ ಸವಾಲುಗಳು ಇವೆ. ಅವುಗಳನ್ನು ನಿವಾರಣೆ ಮಾಡಬೇಕಿದೆ. ಹೊಸ ಅವಿಷ್ಕಾರಗಳ ಮೂಲಕ ಎಐ ಕಾರ್ಯಕ್ಷಮತೆ ವೃದ್ಧಿಸಿದಂತೆ ಮಾನವ ಸಂಪನ್ಮೂಲ ಬಳಕೆ ಕಡಿಮೆಯಾಗಬಹುದು. ಆದರೆ ಈಗಂತೂ ಮಾನನ ಸಂಪನ್ಮೂಲಕ್ಕೆ ತೊಂದರೆ ಇಲ್ಲ ಎಂದರು.
ಇನ್‌ಫಾರ್ಮೇಟಿಕ್ಸ್ ಇಂಡಿಯಾ ಲಿಮಿಟೆಡ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಸತ್ಯನಾರಾಯಣ ಮಾತನಾಡಿ, ಪ್ರತಿನಿತ್ಯ ಅವಿಷ್ಕಾರಗೊಳ್ಳುತ್ತಿರುವ ನೂತನ ತಂತ್ರಜ್ಞಾನಗಳ ಕುರಿತು ಮಾಧ್ಯಮ, ಶಿಕ್ಷಕರು ತಿಳಿದುಕೊಳ್ಳಬೇಕು. ಈ ಮೂಲಕ ಮಾಧ್ಯಮ ಕ್ಷೇತ್ರ ಮತ್ತು ಮಾಧ್ಯಮ ಶಿಕ್ಷಣದ ನಡುವಿನ ಅಂತರವನ್ನು ತುಂಬಬೇಕು. ಇಂದಿನ ಕಾಲಘಟ್ಟದಲ್ಲಿ ನಮ್ಮ ಚಲನವಲನಗಳನ್ನು ತಂತ್ರಜ್ಞಾನ ಗಮನಿಸುವ ಹಂತಕ್ಕೆ ಬಂದಿದ್ದೇವೆ. ಹಾಗಾಗಿ ತಂತ್ರಜ್ಞಾನ ಬಿಟ್ಟು ಇರಲು ಸಾಧ್ಯವಿಲ್ಲ. ಈಗ ತಂತ್ರಜ್ಞಾನ ಬಳಕೆ ಅನಿವಾರ್ಯ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಗಣಕ ಯಂತ್ರ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ ಜೆ.ಹನುಮಂತಪ್ಪ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ ಎಂ.ಚಂದ್ರಶೇಖರ್ ಇದ್ದರು.