ಎಐಡಿಎಸ್‌ಒನಿಂದ ಪ್ರತಿಭಟನೆ

8
Published on

ಸೆಮಿಸ್ಟರ್ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವ ಮೈಸೂರು ವಿಶ್ವವಿದ್ಯಾಲಯ ವ್ಯಾಪಾರಿ ಧೋರಣೆ ಹೊಂದಿದೆ ಎಂದು ಆರೋಪಿಸಿ ಎಐಡಿಎಸ್‌ಒ ಸೋಮವಾರ ಪ್ರತಿಭಟನೆ ನಡೆಸಿತು.

ನಗರದ ಕ್ರಾಫರ್ಡ್ ಭವನದ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯಕ್ಕೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಬಡ-ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಕನಸುಗಳನ್ನು ಹೊತ್ತು ವ್ಯಾಸಂಗಕ್ಕಾಗಿ ಬರುತ್ತಾರೆ. ಆದರೆ ಮೈಸೂರು ವಿವಿ ತನ್ನ ವ್ಯಾಪಾರಿ ಧೋರಣೆಯಿಂದಾಗಿ ಪ್ರತಿ ವರ್ಷ ಶೇ.10 ಪರೀಕ್ಷಾ ಶುಲ್ಕ ಹೆಚ್ಚಿಸುತ್ತಿರುವುದರಿಂದ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಉನ್ನತ ಶಿಕ್ಷಣದಿಂದ ಬಡ ವಿದ್ಯಾರ್ಥಿಗಳು ದೂರ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಂದು ಸೆಮಿಸ್ಟರ್ ಪರೀಕ್ಷಾ ಶುಲ್ಕ 3,300 ರೂ. ದಾಟಿದೆ. ಎಷ್ಟೋ ಸರ್ಕಾರಿ ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ 3-4 ಸಾವಿರ ರೂ. ಇದೆ. ಆದರೆ ಇಲ್ಲಿ ದುಬಾರಿ ಪರೀಕ್ಷಾ ಶುಲ್ಕ ವಿಧಿಸಲಾಗಿದೆ. ಬಹುಸಂಖ್ಯಾತ ವಿದ್ಯಾರ್ಥಿಗಳು ಹಾಗೂ ಪಾಲಕರು ಆರ್ಥಿಕ ಬಿಕ್ಕಟ್ಟಿನಿಂದಾಗಿ ಶುಲ್ಕ ಪಾವತಿ ಮಾಡಲು ಅಸಾಧ್ಯವಾಗಿದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ನಿರಂತರತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಕಿಡಿಕಾರಿದರು.

ಪ್ರತಿಯೊಬ್ಬ ಬಡ ವಿದ್ಯಾರ್ಥಿಗೂ ಶಿಕ್ಷಣ ಸಿಗಬೇಕೆಂಬುದು ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಯ ಆಶಯವಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಂದ ಸುಲಿಗೆ ಮಾಡುತ್ತಿದೆ. ಕೂಡಲೇ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷವೂ ಶೇ.10 ಶುಲ್ಕ ಏರಿಕೆ ನಿರ್ಧಾರ ಹಿಂಪಡೆಯಬೇಕು. ಪ್ರಸ್ತುತ ಸೆಮಿಸ್ಟರ್ ಪರೀಕ್ಷಾ ಶುಲ್ಕ ಹೆಚ್ಚಳ ಕೈಬಿಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ನಿತಿನ್, ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ವಿದ್ಯಾರ್ಥಿಗಳಾದ ಸುಭಿಕ್ಷಾ, ರಕ್ಷಿತಾ, ಸುಕೃತ, ರಕ್ಷಿತ, ಹರ್ಷ, ಆದರ್ಶ, ಹರ್ಷಿತಾ, ರಾಘವೇಂದ್ರ, ಚಂದನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net