

ಮೈಸೂರು: ಎಐಡಿಎಸ್‌ಒ ವತಿಯಿಂದ ಈಶ್ವರಚಂದ್ರ ವಿದ್ಯಾಸಾಗರ ಅವರ ಸ್ಮರಣ ದಿನವನ್ನು ನಗರದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ಆಚರಿಸಲಾಯಿತು. ಜತೆಗೆ, ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಲು ಆಗ್ರಹಿಸಿ ಸಹಿ ಸಂಗ್ರಹಣ ಅಭಿಯಾನ ಮಾಡಲಾಯಿತು.
ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ ಮಾತನಾಡಿ, ಉಳಿಗಮಾನ್ಯ ಆಳ್ವಿಕೆಯಡಿ ಬಹುಕಾಲದವರೆಗೆ ಅಜ್ಞಾನ ಹಾಗೂ ಮೌಢ್ಯದ ಅಂಧಕಾರದಲ್ಲಿ ಮುಳುಗಿ ಬಳಲುತ್ತಿದ್ದ ಭಾರತದ ನೆಲಕ್ಕೆ ಆಧುನಿಕ ಜ್ಞಾನದ ಬೆಳಕನ್ನು ಹೊತ್ತು ತಂದ ಸೂರ್ಯನಂತೆ ಉದಯಿಸಿದವರು ಮಹಾನ್ ಧರ್ಮ ನಿರಪೇಕ್ಷ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ಅವರು.
ಶತಮಾನಗಳವರೆಗೂ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಕೆಳವರ್ಗದ ಸಮುದಾಯಗಳಿಗೆ ವಿದ್ಯೆ ನೀಡಲು ಮತ್ತು ಬಾಲ್ಯದಲ್ಲೇ ವಿಧವೆಯರಾಗಿ ನರಕದ ಬದುಕು ಸವೆಸುತ್ತಿದ್ದ ಹೆಣ್ಣುಮಕ್ಕಳ ಮರುವಿವಾಹಕ್ಕಾಗಿ ಅವರು ಅವಿರತ ಶ್ರಮಿಸಿದರು. ಜತೆಗೆ, ಹಳೆಯ ಗೊಡ್ಡು ಸಂಪ್ರದಾಯಗಳ ಸಂಕುಚಿತ ಚಿಂತನೆಗಳ ವಿರುದ್ಧ ಹೋರಾಡಿದ ವಿದ್ಯಾಸಾಗರರು, ನವೋದಯ ಚಳವಳಿಯ ಪತಾಕೆಯನ್ನು ಭಾರತದ ಆಗಸದಲ್ಲಿ ಹಾರಿಸಿದರು ಎಂದರು.
ಇಂದು ಶಿಕ್ಷಣವು ಖಾಸಗೀಕರಣಗೊಂಡು ಮಾರಾಟವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ರಾಜ್ಯದಲ್ಲಿ 6000ಕ್ಕೂ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ. 3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಗೃಹ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಲವು ಶಾಲೆಗಳ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಾಣದೆ ಛಾವಣಿಗಳು ಸೋರುತ್ತಿವೆ.
ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 59,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 29 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. ಅಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು
ನಿರುದ್ಯೋಗ, ಬಡತನ, ಹಸಿವು ದೇಶಾದ್ಯಂತ ತಾಂಡವವಾಡುತ್ತಿದೆ. ಬಡ ರೈತ ಕಾರ್ಮಿಕರು, ಮಧ್ಯಮವರ್ಗದ ಜನತೆ ತುಳಿತಕ್ಕೊಳಪಡುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಎಂಥದ್ದೇ ಅನ್ಯಾಯವನ್ನೂ ಪ್ರಶ್ನಿಸುತ್ತಿದ್ದ ವಿದ್ಯಾಸಾಗರರ ಆದರ್ಶ ಮೈಗೂಡಿಸಿಕೊಂಡು ಸಾಮಾಜಿಕ ಪಿಡುಗುಗಳ ವಿರುದ್ಧ ಚಳವಳಿ ಕಟ್ಟಲು ಮುನ್ನುಗ್ಗಬೇಕಿದೆ. ಆಗ ಮಾತ್ರ ನಾವು ವಿದ್ಯಾಸಾಗರರಿಗೆ ನೈಜ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ನಿತಿನ್, ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಅಭಿಷೇಕ್, ದಿಶಾ, ಅಂಜಲಿ ಹಾಗೂ ವಿದ್ಯಾರ್ಥಿಗಳಾದ ಆರ್ಥಿ, ಸ್ನೇಹ, ಪ್ರಿಯಾಂಕಾ, ಚೈತ್ರಾ ಭಾಗವಹಿಸಿದ್ದರು