ಎಐ ವಿವೇಕದಿಂದ ಬಳಸಿ

26 smg 21
ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಳವಾಡಿ ಸೃಜನಶೀಲ ಸಾಹಿತ್ಯ ಮತ್ತು ಕೃತಕ ಬುದ್ದಿಮತ್ತೆ- ಭವಿಷ್ಯದ ದಿನಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ವಿನಯ್ ಇದ್ದರು.
Published on

ಶಿವಮೊಗ್ಗ: ಭವಿಷ್ಯದಲ್ಲಿ ನಾವು ಎಐ(ಕೃತಕ ಬುದ್ದಿಮತ್ತೆ)ನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗದ ಮಾತು. ಅದರ ಹೊರತಾದ ವ್ಯವಸ್ಥೆಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಆದರೆ ವಿವೇಕದಿಂದ ಅದನ್ನು ಬಳಸಿಕೊಳ್ಳುವುದೊಂದೇ ನಮ್ಮ ಮುಂದಿರುವ ಆಯ್ಕೆ ಎಂದು ನಟ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟರು. ಕರ್ನಾಟಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಸೃಜನಶೀಲ ಸಾಹಿತ್ಯ ಮತ್ತು ಕೃತಕ ಬುದ್ದಿಮತ್ತೆ- ಭವಿಷ್ಯದ ದಿನಗಳು ಎಂಬ ವಿಷಯದ ಕುರಿತು ಮಾತನಾಡಿದ ಅವರು, ನಾವು ಮುಂಬರುವ ದಿನಗಳಲ್ಲಿ ಎಐಗೆ ಸವಾಲೊಡ್ಡದೇ ಅದರ ಸದುಪಯೋಗ ಮಾಡಿಕೊಳ್ಳುವುದು ಸೂಕ್ತ ಎಂದರು. ಕೃಷಿಯಲ್ಲಿ ಎಐ ಸದ್ಬಳಕೆ ಮಾಡಿಕೊಂಡರೆ ಬದಲಾಗುತ್ತಿರುವ ಹವಾಮಾನ ವೈಪರೀತ್ಯದಿಂದ ಕೃಷಿ ವಲಯದಲ್ಲಾಗುತ್ತಿರುವ ಅಲ್ಲೋಲ ಕಲ್ಲೋಲಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮಣ್ಣಿನ ಮಾದರಿಯನ್ನು ಅನುಸರಿಸಿ ಎಐ ಸಹಾಯದಿಂದ ದೇಶದ ಯಾವ ಭಾಗದಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಫಸಲು ಪಡೆದುಕೊಳ್ಳಬಹುದೆಂದು ಗುರುತಿಸಿ ದೇಶದ ಅಪೌಷ್ಟಿಕತೆ, ಆಹಾರ ಕೊರತೆಯನ್ನು ನೀಗಿಸಿಕೊಳ್ಳಬಹುದು ಎಂದು ಹೇಳಿದರು. ಶಿಕ್ಷಣದಲ್ಲಿ ಎಐ ಬಳಕೆ ಸಮರ್ಪಕವಾಗಿ ನಡೆದರೆ ಸಾಕ್ಷರತೆ ಪ್ರಮಾಣ ಶೇ.100 ತಲುಪಬಹುದು. ಕಳೆದ 30 ವರ್ಷಗಳ ಹಿಂದೆ ಕಂಪ್ಯೂಟರ್‌ನಿಂದ ಆಗಿರುವ ಬದಲಾವಣೆಗೂ ಹೆಚ್ಚಿನದಾಗಿ ಮುಂಬರುವ ಕೆಲವೇ ವರ್ಷಗಳಲ್ಲಿ ಎಐನಿಂದ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ ಎಂದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿನಯ್ ಪ್ರಾಸ್ತಾವಿಕ ಮಾತನಾಡಿದರು. ಡಾ. ಮೈತ್ರೇಯಿ ಕಾರ್ಯಕ್ರಮ ನಿರ್ವಹಿಸಿದರು.

ಕಂಪ್ಯೂಟರ್‌ಗೂ ವಿರೋಧವಿತ್ತು ಆರಂಭದ ದಿನಗಳಲ್ಲಿ ಕಂಪ್ಯೂಟರ್ ಪರಿಚಯಿಸಿದ ಸಂದರ್ಭದಲ್ಲಿ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದು ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಆದರೆ ಇಂದು ಕಂಪ್ಯೂಟರ್ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ಇದರಿಂದ ಬಹಳಷ್ಟು ಪ್ರಯೋಜನಗಳಾಗಿವೆ. ಸಮಯ ಉಳಿತಾಯವಾಗಿದೆ. ದತ್ತಾಂಶ ಸಂಗ್ರಹ ಸುಲಭವಾಗಿದೆ. ಈಗ ಎಐಗೂ ವಿರೋಧ ವ್ಯಕ್ತವಾಗುತ್ತಿದೆ. ಆರಂಭದಲ್ಲಿ ಎಐ ಕಾರ್ಯಕಂಡು ಎಲ್ಲರೂ ಮಂತ್ರಮುಗ್ದರಾಗಿದ್ದಾರೆ. ಆದರೆ ಭವಿಷ್ಯದ ಬಗ್ಗೆಯೂ ಆಲೋಚನೆ ಮಾಡಬೇಕು ಎಂದು ಪ್ರಕಾಶ್ ಬೆಳವಾಡಿ ಹೇಳಿದರು. ಸಾಹಿತಿಗಳಿಗೂ ತೊಂದರೆ ತಪ್ಪಿದ್ದಲ್ಲ ಎಐ ಬಂದರೆ ನಮ್ಮ ಕ್ಷೇತ್ರಗಳಿಗೆ ಏನೂ ತೊಂದರೆಯಿಲ್ಲ ಎಂದು ಅನೇಕರು ವಿಶ್ವಾಸದಲ್ಲಿದ್ದಾರೆ. ವೈದ್ಯರು, ಶಿಕ್ಷಕರು, ಸಾಹಿತಿಗಳು ಹೀಗೆ ವಿವಿಧ ವಲಯಗಳಲ್ಲಿ ಈ ಅಭಿಪ್ರಾಯಗಳಿವೆ. ಆದರೆ ಎಐನಲ್ಲಿ ನೀವು ಯಾವುದೇ ಸಾಹಿತ್ಯ ಕೋರಿದರೆ ಅದು ಕೆಲವೇ ಸೆಕೆಂಡ್‌ನಲ್ಲಿ ವಿಶ್ವದ ಸರ್ವಶ್ರೇಷ್ಠ ಸಾಹಿತ್ಯಗಳನ್ನು ಎಲ್ಲ ಭಾಷೆಯ ಸಾಹಿತ್ಯಗಳನ್ನು ಸಂಗ್ರಹಿಸಿ ಕೊಡಬಲ್ಲದು. ಎಐ ಬಳಸಿಕೊಂಡು ಚಿತ್ರ ನಿರ್ಮಾಣ ನಡೆಯುತ್ತಿದೆ. ಡಿಜಿಟಲ್ ತಂತ್ರಜ್ಞಾನ ಸಿನಿಮಾ ರಂಗವನ್ನು ಆವರಿಸಿಕೊಂಡಂತೆ ಎಐ ಕೂಡಾ ಸಿನಿಮಾ ಹಾಗೂ ಸಾಹಿತ್ಯ ವಲಯವನ್ನು ತೀವ್ರವಾಗಿ ಆವರಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದ ಪ್ರಕಾಶ್ ಬೆಳವಾಡಿ, ನಮ್ಮ ಸಾಮರ್ಥ್ಯದ ವಿಶ್ವಾಸ ಕೆಲಸ ಕಸಿದುಕೊಳ್ಳಲಿದೆ ಶ್ರಮಿಕ ವರ್ಗದ ಅನೇಕ ಮಂದಿ ನಿರ್ವಹಿಸುವ ಕಾರ್ಯವನ್ನು ರೋಬಾಟ್‌ವೊಂದು ಮಾಡುತ್ತದೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಸ್ವಚ್ಛತೆಗೆ ಹತ್ತಾರು ಮಂದಿ ಶ್ರಮಿಕವರ್ಗದವರು ಕೆಲಸ ಮಾಡಬೇಕು. ಆದರೆ ಒಂದು ರೋಬಾಟ್ ಅಷ್ಟೂ ಜನರ ಕೆಲಸ ಮಾಡಬಲ್ಲದು. ಅದಕ್ಕೆ ಹರಿಗೆ ರಜೆ, ಅನಾರೋಗ್ಯಕ್ಕೆಂದು ರಜೆ, ವಾರಾಂತ್ಯದ ರಜೆ ನೀಡಬೇಕಿಲ್ಲ. ಅದು ಸಂಬಳ ಕೇಳುವುದಿಲ್ಲ. ಅದಕ್ಕೆ ಶ್ರಮವಾಗುವುದಿಲ್ಲ. ನಾವು ಬೈದರೂ ಬೇಸರವಾಗುವುದಿಲ್ಲ. ಅದಕ್ಕೆ ಕಾರ್ಮಿಕ ಕಾಯ್ದೆ ಅನ್ವಯವಾಗುವುದಿಲ್ಲ. ಅದು ಕೆಟ್ಟ ನಿಂತ ಮೇಲೆ ಕೆಲಸದಿಂದ ನಿವೃತ್ತಿಗೊಳಿಸಿದರೂ ಅದು ಪ್ರತಿಭಟಿಸುವುದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಎಐ ಬಹುತೇಕರ ಕೆಲಸಗಳನ್ನು ಕಸಿದುಕೊಳ್ಳಲಿದೆ ಎಂದು ಪ್ರಕಾಶ್ ಬೆಳವಾಡಿ ಹೇಳಿದರು. ಜಾತಿ, ಧರ್ಮ ಕೇಳಲ್ಲ ಇಂದು ಕಂಪ್ಯೂಟರ್‌ನಿಂದ ಅನೇಕ ಅನುಕೂಲಗಳಾಗಿವೆ. ಎಐ ಇದರ ಮುಂದುವರಿದ ತಂತ್ರಜ್ಞಾನವಾಗಿ ಎಐ ಬರುತ್ತಿದೆ. ನೀವು ಯಾವ ಮಾಹಿತಿ ಕೇಳಿದರೂ ಇದು ನೀಡಬಲ್ಲದು. ನೀವು ಯಾವ ಜಾತಿಯವರು, ರಾಜ್ಯದವರು, ದೇಶದವರು ಎಂದು ಇದು ಕೇಳುವುದಿಲ್ಲ. ಇದಕ್ಕೆ ಮೀಸಲಾತಿ ಅನ್ವಯವಾಗುವುದಿಲ್ಲ. ರಾತ್ರಿ, ಹಗಲುಗಳ ಪರಿವೆಯಿಲ್ಲ. ತನ್ನ ಸಂಗ್ರಹದಲ್ಲಿರುವ ಮಾಹಿತಿಗಳ ಪೈಕಿ ಅತ್ಯುತ್ತಮವಾದುದನ್ನು ಇದು ಒದಗಿಸಬಲ್ಲದು ಎಂದು ಪ್ರಕಾಶ್ ಬೆಳವಾಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net