

ತುಮಕೂರು: ಎಂಬಿಎ ಕೇವಲ ಪದವಿಯಲ್ಲ. ಇದು ಜಾಗತಿಕ ಅವಕಾಶಗಳಿಗೆ ಹೆಬ್ಬಾಗಿಲಾಗಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್. ಬಿ.ಪ್ರದಿಪ್ಕುಮಾರ್ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಟೆಕ್ನಾಲಜಿ(ವಿಮ್ಟೆಕ್) ವತಿಯಿಂದ ಶನಿವಾರ ಆಯೋಜಿಸಿದ್ದ "ಎಐ- ಚಾಲಿತ ಜಗತ್ತಿನಲ್ಲಿ ಎಂಬಿಎ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಬೆಳೆಯುತ್ತಿರುವಂತೆ ವಿಶ್ವವು ಚಿಕ್ಕದಾಗುತ್ತಿದೆ. ಇದಕ್ಕೆ ಪೂರಕವಾಗಿ ಕೌಶಲವನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ವಿಮ್ಟೆಕ್ನ ಎಂಬಿಎ ವಿದ್ಯಾರ್ಥಿಗಳಿಗೆ ಜಪಾನ್ನ ಕಂಪನಿಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುವುದು ಎಂದು ತಿಳಿಸಿದರು.
ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಟೆಕ್ನಾಲಜಿಯಲ್ಲಿ ಸರ್ಕಾರ, ತುಮಕೂರು ವಿಶ್ವವಿದ್ಯಾಲಯ ಮತ್ತು ಎಐಸಿಟಿಇ ಅನುಮೋದಿತ ಹೊಸ ಎಂಬಿಎ ಕೋರ್ಸ್ನ್ನು ಪರಿಚಯಿಸಿದ್ದು, ಈ ಕೋರ್ಸ್ ಎಐ ಮತ್ತು ಜಪಾನೀ ಭಾಷಾ ಕೌಶಲಗಳನ್ನು ಒಳಗೊಂಡಿದೆ.
ಉದ್ಯೋಗಾವಕಾಶಗಳ ಸೃಷ್ಟಿ, ಭಾಷಾ ಪರಿಣತಿ ಮತ್ತು ಸಮಗ್ರ ಪ್ರಮಾಣೀಕರಣಕ್ಕಾಗಿ ಕೌಶಲ ಆಧಾರಿತ ಪ್ರಮಾಣಪತ್ರ ಕೋರ್ಸ್ ಅನ್ನು ನೀಡುತ್ತದೆ ಎಂದರು.
ಬೆಂಗಳೂರಿನ ಬ್ರಿಸಾ ಟೆಕ್ನಾಲಜೀಸ್ನ ಸಂಸ್ಥಾಪಕ ಸುಭೋದ್ ಪಾಟೀಲ್ ಮಾತನಾಡಿ, ಚಾಟ್ ಜಿಪಿಟಿಯಂತಹ ಎಐ -ಚಾಲಿತ ತಂತ್ರಜ್ಞಾನಗಳು ಕಂಪನಿಗಳಿಗೆ ಸಂಕೀರ್ಣ ಸಮಸ್ಯೆಗಳನ್ನು ಕೋಡಿಂಗ್ ಇಲ್ಲದೆ ಪರಿಹರಿಸಲು ಸಹಾಯ ಮಾಡುತ್ತವೆ. ಎಐ ತಂತ್ರಜ್ಞಾನ- ಚಾಲಿತ ಕೆಲಸದ ವಾತಾವರಣವನ್ನು ಮರು ರೂಪಿಸುತ್ತಿದೆ ಎಂದು ತಿಳಿಸಿದರು.
ಎಐಯು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ, ವಿಶೇಷವಾಗಿ ಕೋ-ಪೈಲಟ್ ಸಿಸ್ಟಮ್ಗಳ ಮೂಲಕ ಕಾರ್ಯಪ್ರವಾಹವನ್ನು ರೂಪಾಂತರಗೊಳಿಸುತ್ತಿದೆ. ನಿರಂತರ ಕಲಿಕೆ ಮತ್ತು ಹೊಂದಿಕೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಎನ್ಸಿಂಥೆಸಿಸ್ ಕಂಪನಿಯ ಸಹ-ಸಂಸ್ಥಾಪಕ ಸುಬ್ರಮಣ್ಯ ದೇಸಾಯಿ ತಿಳಿಸಿದರು.
ಟಮಾಲ ಸಂಸ್ಥಾಪಕ ವಿನಯ್ ಪ್ರಶಾಂತ್, ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೆಲಿಯಾದ ಕ್ಯೂಆರ್ ನಿರ್ದೇಶಕ ಅಮನ್ ಸಕ್ಸೇನಾ, ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟೇಲಿಯಾದ ಕ್ಯೂಆರ್ ಸಹಾಯಕ ನಿರ್ದೇಶಕ ಆರ್.ಸುನಿಲ್, ಪೀಪಲ್ ಆ್ಯಂಡ್ ಕಲ್ಚರ್ನ ಹಿರಿಯ ನಿರ್ದೇಶಕಿ ರೂಪಸಿ ಎಸ್.ಮೂರ್ತಿ, ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲೆ ಜಿ.ಅಮೂಲ್ಯಾ, ಎಂಬಿಎ ನಿರ್ದೇಶಕ ಡಾ.ಟಿ.ಎಂ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.