ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಹಾಸನದಿಂದ ಅಗಿಲೆ ಯೋಗೇಶ್‌ಗೆ ಟಿಕೆಟ್

ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಹಾಸನದಿಂದ ಅಗಿಲೆ ಯೋಗೇಶ್‌ಗೆ ಟಿಕೆಟ್
Published on

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಆಮ್ ಆದ್ಮಿ ಪಕ್ಷದ ವತಿಯಿಂದ ಸೋಮವಾರ ಬಿಡುಗಡೆಯಾಗಿರುವ 80 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಗಿಲೆ ಯೋಗೇಶ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

ಟಿಕೆಟ್ ಘೋಷಣೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಗಿಲೆ ಯೋಗೇಶ್, ನಾನು ಪಕ್ಷಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಅಂದಿನಿಂದಲೂ ಕೂಡ ಕ್ಷೇತ್ರದಲ್ಲಿ ಚುನಾವಣೆಗೆ ತಯಾರಿ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಸೋಮವಾರ ರಾಜ್ಯದ ಎಎಪಿ ನಾಯಕರು 80 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನನ್ನ ಹೆಸರಿರುವುದು ನಿಜಕ್ಕೂ ಸಂತೋಷ ತಂದಿದೆ. ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರರಹಿತ ಚುನಾವಣೆ ನಡೆಸಲಾಗುವುದು. ಕ್ಷೇತ್ರದ ಜನರು ಕೂಡ ಈ ಬಾರಿ ಆಮ್ ಆದ್ಮಿ ಪಕ್ಷ ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ಮನೆ ಮನೆಗೆ ಪೊರಕೆ ವಿತರಣೆ ಮಾಡಿ ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ. ಇದರ ಜೊತೆಗೆ ಬೂತ್ ಮಟ್ಟದಲ್ಲಿಯೂ ಕೂಡ ಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಮತ್ತು ನನ್ನ ವಿರುದ್ಧ ನೇರ ಹಣಾಹಣಿ ನಡೆಯಲಿದೆ ಎಂದು ಅಗಿಲೆ ಯೋಗೇಶ್ ಹೇಳಿದರು.

ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಈಗಾಗಲೇ ನಮ್ಮ ಪಕ್ಷ ದೆಹಲಿ ಮತ್ತು ಪಂಜಾಬಿನಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಅದೇ ರೀತಿಯ ಆಡಳಿತವನ್ನು ರಾಜ್ಯದ ಜನರು ಮತ್ತು ಹಾಸನ ಕ್ಷೇತ್ರದ ಜನರು ಬಯಸುತ್ತಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಕೂಡ ಹೆಚ್ಚು ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net