ಎಎನ್‌ಎಂ ತರಬೇತಿ ರದ್ದು ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

29_HSN_05
Published on

ಹಾಸನ: ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕೇಂದ್ರಗಳನ್ನು (ಎಎನ್‌ಎಂ) ರದ್ದುಗೊಳಿಸುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸಾಹಿತಿ ರೂಪಾ ಹಾಸನ ಮಾತನಾಡಿ, ಹಲವು ವರ್ಷಗಳಿಂದ ಸರ್ಕಾರದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೆಂದ್ರಗಳಲ್ಲಿ ಎರಡು ವರ್ಷಗಳ ಕಾಲ ಎಎನ್‌ಎಂ ತರಬೇತಿ ಪಡೆದು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಆರೋಗ್ಯ ಸಹಾಯಕಿಯರ ಪಾತ್ರ ಮಹತ್ವದಾಗಿದೆ. ಎಎನ್‌ಎಂ ತರಬೇತಿ ಪಡೆದವರು ದಶಕಗಳಿಂದಲೂ ಗ್ರಾಮಗಳಲ್ಲಿ ವೈದ್ಯರಂತೆಯೇ ಪ್ರಾಥಮಿಕ ಚಿಕಿತ್ಸೆ, ಆರೋಗ್ಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.

ಏಪ್ರಿಲ್ 22 ರಂದು ಎಎನ್‌ಎಂ ತರಬೇತಿಗಳನ್ನು ನಿಲ್ಲಿಸಲಾಗುವುದು. ರಾಜ್ಯದ 18 ಜಿಎನ್‌ಎಂ ತರಬೇತಿ ಕೇಂದ್ರಗಳಿಗೆ ಪ್ರಸಕ್ತ ಸಾಲಿನಲ್ಲಿ ಎಎನ್‌ಎಂ ತರಬೇತಿಗೆ ಸೇರಿರುವ ವಿದ್ಯಾರ್ಥಿನಿಯರು ಸೇರ್ಪಡೆಗೊಳ್ಳಬಹುದುದೆಂದು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಲಾಗಿದೆ. ಎರಡು ವರ್ಷಗಳ ಈ ಕೋರ್ಸ್‌ಗೆ ಜನವರಿಯಲ್ಲೇ ಪ್ರವೇಶ ಪಡೆದು, ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿ ಯರು, ಇದೇ ತಿಂಗಳ 28ರಿಂದ ಅಂತರಿಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ತರಬೇತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಕೇಂದ್ರಗಳನ್ನೇ ಮುಚ್ಚಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರದ ಈ ನಿಲುವಿನಿಂದಾಗಿ ಎಎನ್‌ಎಂ. ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಯರಿಗೆ ಸರ್ಕಾರವೇ ವಂಚನೆ ಮಾಡಿದಂತಾಗಿದೆ. ಅವರ ಶಿಕ್ಷಣ ಮತ್ತು ಉದ್ಯೋಗವಕಾಶವನ್ನು ಕಸಿದುಕೊಳ್ಳುವ ಕ್ರಮವಾಗಿದೆ ಎಂದು ದೂರಿದರು.

ಆರ್ಥಿಕವಾಗಿ ಹಿಂದುಳಿದ ಬಡ, ಮಧ್ಯಮ ವರ್ಗದ, ಗ್ರಾಮೀಣ ಪ್ರದೇಶದ ಮತ್ತು ದಲಿತ ಸಮುದಾಯಗಳಿಗೆ ಸೇರಿದ ಈ ವಿದ್ಯಾರ್ಥಿನಿಯರು ಉದ್ಯೋಗಾವಕಾಶದ ಇಚ್ಛೆಯಿಂದ ಈ ಕೋರ್ಸ್‌ಗೆ ಸೇರಿ ತರಬೇತಿ ಪಡೆಯುತ್ತಿದ್ದಾರೆ. ಕೇಂದ್ರದಲ್ಲಿ 19 ವಿದ್ಯಾರ್ಥಿನಿಯರು ತರಬೇತಿ ಪಡೆಯುತ್ತಿದ್ದು, ಇವರು ಹಾಸನದ ಗ್ರಾಮೀಣ ಭಾಗದ ಹಾಗೂ ದೂರದ ಕಲಬುರಗಿ, ಹಾವೇರಿ ಮತ್ತಿತರ ಜಿಲ್ಲೆಯವರೂ ಇದ್ದಾರೆ. ಸರ್ಕಾರದ ಈ ಕ್ರಮದಿಂದಾಗಿ ಇವರ ಭವಿಷ್ಯ ಮತ್ತು ಬದುಕು ಅತಂತ್ರವಾಗುತ್ತದೆ. ಈ ವಿದ್ಯಾರ್ಥಿಗಳು ಇಲಾಖೆಯ ನಿಯಮಾವಳಿಗಳ ಆಧಾರದಲ್ಲಿಯೇ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಏಕಾಏಕಿ ಮಧ್ಯಂತರದಲ್ಲಿ ಸರ್ಕಾರವೇ ತನ್ನ ನಿಯಮಗಳನ್ನು ಬದಲಿಸಿ ತರಬೇತಿ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಒಟ್ಟು 20 ತರಬೇತಿ ಕೇಂದ್ರಗಳ 580 ವಿಧ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ಪಡೆಯುವ ಅವಕಾಶ ನಿರಾಕರಿಸಲಾಗಿದೆ. ಇಲಾಖೆಯು ತರಬೇತಿಯ ನಿಯಮಗಳಿಗೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ಅರ್ಧಕ್ಕೆ ಸ್ಥಗಿತಗೊಳಿಸುತ್ತಿರುವುದಲ್ಲದೇ ವಿಧ್ಯಾರ್ಥಿಗಳಿಗೆ ಬೆದರಿಸಿ ಅವರಿಂದ ಬಲವಂತವಾಗಿ ಸಮ್ಮತಿ ಪತ್ರಕ್ಕೆ ಸಹಿ ಪಡೆದುಕೊಂಡಿದೆ. 2024ರ ನವೆಂಬರ್‌ನಲ್ಲಿ ಅರ್ಜಿ ಕರೆದಾಗ ಪದವಿ ವಿಧ್ಯಾಭ್ಯಾಸವನ್ನು ಅರ್ಧದಲ್ಲಿಯೇ ತೊರೆದು ಎಎನ್‌ಎಂ ತರಬೇತಿಗೆ ವಿಧ್ಯಾರ್ಥಿಗಳು ಸೇರಿದ್ದಾರೆ. ಅರ್ಜಿ ಕರೆಯುವ ಮೊದಲೇ ಈ ನಿರ್ಧಾರ ತೆಗೆದುಕೊಂಡಿದ್ದರೆ ವಿದ್ಯಾರ್ಥಿಗಳು ಅಲ್ಲೇ ಓದು ಮುಂದುವರಿಸುತ್ತಿದ್ದರು. ಈಗ ಸರ್ಕಾರವೇ ಬಡ, ದಲಿತ ಮತ್ತು ಗ್ರಾಮೀಣ ಭಾಗದ ವಿಧ್ಯಾರ್ಥಿನಿಯರ ಬದುಕನ್ನು ಅತಂತ್ರಕ್ಕೆ ತಳ್ಳಿದೆ. ಸರ್ಕಾರದ ಈ ಕ್ರಮ ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ಖಂಡಿಸಿದರು.

ಸರ್ಕಾರ ಮತ್ತು ರಾಜ್ಯ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಸಂಸ್ಥೆಯು ಎಎನ್‌ಎಂ ತರಬೇತಿಯನ್ನು ರದ್ದುಗೊಳಿಸುವ ಆದೇಶವನ್ನು ತಕ್ಷಣದಲ್ಲೇ ಹಿಂಪಡೆಯಬೇಕು. ಈಗಾಗಲೇ ಎರಡು ವರ್ಷಗಳ ಎಎನ್‌ಎಂ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗದಂತೆ ಕೋರ್ಸ್ ಮುಂದುವರಿಸಬೇಕು ಹಾಗೂ ಈ ತರಬೇತಿ ಆಧಾರದಲ್ಲಿ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಎಲ್ಲರಿಗೂ ಉದ್ಯೋಗಾವಕಾಶ ಸಿಗುವಂತೆ ನೇಮಕಾತಿ ಮಾಡಿಕೊಳ್ಳಬೇಕೆಂದು ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟವು ಒತ್ತಾಯಿಸಿ ಮನವಿ ಮಾಡುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯ್ ಕುಮಾರ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡರಾದ ಕೃಷ್ಣದಾಸ್, ರವಿ ಬಸವಾಪುರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net