ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಂಸಿಡಿಸಿಸಿ) ಆಡಳಿತ ಮಂಡಳಿ ಚುನಾವಣೆ ಪ್ರಕ್ರಿಯೆ ರದ್ದು ಪಡಿಸಿರುವುದರ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆದಿದೆ.
ಮತದಾರರ ಪಟ್ಟಿ ತಯಾರಿಸಿಲ್ಲ ಎನ್ನುವ ಕಾರಣಕ್ಕೆ ಚುನಾವಣೆ ಪ್ರಕ್ರಿಯೆ ರದ್ದುಪಡಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರ ನಡುವೆ ಈಗ ಮತ್ತೊಂದು ಸುತ್ತಿನ ಮುಸುಕಿನ ಗುದ್ದಾಟ ಆರಂಭಗೊಂಡಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಒಂದು ಕಾಲದಲ್ಲಿ ಆಪ್ತರಾಗಿದ್ದ ಈ ಇಬ್ಬರು ನಾಯಕರು ರಾಜಕೀಯ ಕಾರಣದಿಂದ ದೂರವಾಗಿ ಹಿಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಮುಖಾಮುಖಿಯಾಗಿದ್ದರು. ಬಳಿಕ ನಡೆದ ವಿದ್ಯಮಾನದಲ್ಲಿ ಇಬ್ಬರೂ ಒಂದಾಗಿ ಜಿ.ಟಿ.ದೇವೇಗೌಡರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಲೆಕ್ಕಾಚಾರವೂ ಇತ್ತು.
ಅಂತಿಮವಾಗಿ ಜೆಡಿಎಸ್‌ನಲ್ಲೇ ಜಿ.ಟಿ.ದೇವೇಗೌಡರು ಉಳಿದು ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದಲ್ಲದೆ, ಇತ್ತೀಚೆಗೆ ಮುಖ್ಯಮಂತ್ರಿ ವಿರುದ್ಧವೇ ಬಹಿರಂಗವಾಗಿ ಟೀಕೆ, ಆರೋಪಗಳನ್ನು ಮಾಡಲು ಆರಂಭಿಸಿದ್ದಾರೆ. ಹೀಗಾಗಿ, ಜಿ.ಟಿ.ದೇವೇಗೌಡ ಅವರ ಮಗ ಅಧ್ಯಕ್ಷರಾಗಿರುವ ಎಂಸಿಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ತಪ್ಪಿಸಲು ಚುನಾವಣೆಯನ್ನೇ ಮುಂದೂಡಲು ರಾಜಕೀಯ ತಂತ್ರ ಹೆಣೆಯಲಾಗಿದೆ ಎನ್ನಲಾಗುತ್ತಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿದ್ದ ಹಿನ್ನೆಲೆಯಲ್ಲಿ ನವೆಂಬರ್ 4ಕ್ಕೆ ಚುನಾವಣೆ ನಿಗದಿಪಡಿಸಲಾಗಿತ್ತು. ಆದರೆ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ನಡೆಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಅಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚುನಾವಣೆ ಪ್ರಕ್ರಿಯೆ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ನಿಯಮಾವಳಿಗಳು 1960ರ ನಿಯಮ 13(ಡಿ) (1 (2) ರನ್ವಯ ಮತದಾರರ ಪಟ್ಟಿ ತಯಾರಿಕಾ ಕಾರ್ಯ ನಡೆಸದೆ ಇರುವುದರಿಂದ ಸೆ.1ರಂದು ನಡೆದ ಸಭಾ ನಡಾವಳಿಗಳ ಅನ್ವಯ ಚುನಾವಣಾ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿನ ಡೆಲಿಗೇಟ್ ಫಾರ್ಮ್‌ಗಳನ್ನು ಸಲ್ಲಿಸುವಂತೆ ಸದಸ್ಯ ಸಹಕಾರ ಸಂಘಗಳಿಗೆ ನಿರ್ದೇಶನಗಳನ್ನು ನೀಡಿರುವ ಬಗ್ಗೆ ದೂರುಗಳು ಬಂದಿದ್ದು, ಪ್ರಸ್ತುತ ಬಾಂಕಿನ ಚುನಾವಣಾ ಅಧಿಸೂಚನೆಯನ್ನು ಹಿಂಪಡೆದಿರುವುದರಿಂದ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ನಿಯಮಾವಳಿಗಳು 1960ರ ನಿಯಮ 13(ಡಿ)ದ ಅವಕಾಶದಂತೆ ಸದಸ್ಯ ಸಹಕಾರ ಸಂಘಗಳು ತನ್ನ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಡೆಲಿಗೇಟ್ ಫಾರ್ಮ್‌ಗಳ ಪ್ರಕ್ರಿಯೆಯನ್ನು ಮುಂದಿನ ಅಧಿಸೂಚನೆ ಹೊರಡಿಸುವವರೆಗೂ ಸಲ್ಲಿಸದಂತೆ ಬ್ಯಾಂಕಿನ ವ್ಯಾಪ್ತಿಗೆ ಒಳಪಡುವ ಎಲ್ಲ ಸದಸ್ಯ ಸಹಕಾರ ಸಂಘಗಳಿಗೆ ನಿರ್ದೇಶನ ನೀಡಲಾಗಿದೆ.
ಇದರ ಹೊರತಾಗಿಯೂ ಸಂಘಗಳು ಡೆಲಿಗೇಟ್ ಫಾರ್ಮ್‌ಗಳನ್ನು ಸಲ್ಲಿಸಿದಲ್ಲಿ ಅಥವಾ ಸಲ್ಲಿಸುತ್ತಿದ್ದಲ್ಲಿ ಅದು ಅಸಿಂಧುವಾಗುತ್ತದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಹೀಗಾಗಿ, ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಹಾಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ಜಿ.ಡಿ. ಹರೀಶ್‌ಗೌಡ ನೇತೃತ್ವದ ಆಡಳಿತ ಮಂಡಳಿ ಅಧಿಕಾರಾವಧಿ ನವೆಂಬರ್ 10ಕ್ಕೆ ಅಂತ್ಯವಾಗಲಿದೆ. ಅಷ್ಟರೊಳಗೆ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕಾಗಿತ್ತು.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ
ಡೆಲಿಗೇಟ್ ಫಾರ್ಮ್ ಸಲ್ಲಿಸಲು ಯಾವುದೇ ಅಭ್ಯಂತ ಇಲ್ಲದಿದ್ದರೂ ಚುನಾವಣಾಧಿಕಾರಿ ಅಧಿಸೂಚನೆ ಹಿಂಪಡೆದಿರುವುದಕ್ಕೆ ಪೂರಕವಾಗಿ ಡೆಲಿಗೇಟ್ ಫಾರ್ಮ್ ಸಲ್ಲಿಸಬಾರದೆಂದು ಆದೇಶ ಹೊರಡಿಸಿರುವುದು ಅಚ್ಚರಿ ಮೂಡಿಸಿದೆ. ಈ ಸಂಬಂಧ ಕಾನೂನು ಹೋರಾಟ ನಡೆಸಲು ಉದ್ದೇಶಿಸಲಾಗಿದೆ. ಚುನಾವಣಾ ಅಧಿಸೂಚನೆ ಹಿಂಪಡೆದಿರುವ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಮುಂದಿನ ತೀರ್ಮಾನಕ್ಕೆ ಕಾಯುತ್ತಿದ್ದೇವೆ.
ಜಿ.ಡಿ.ಹರೀಶ್‌ಗೌಡ
ಅಧ್ಯಕ್ಷರು, ಎಂಸಿಡಿಸಿಸಿ ಬ್ಯಾಂಕ್