ಎಂಬಿಬಿಎಸ್ ವಿದ್ಯಾರ್ಥಿ ಸಾವು:ಡೆಂಘೆ ಶಂಕೆ

ಎಂಬಿಬಿಎಸ್ ವಿದ್ಯಾರ್ಥಿ ಸಾವು:ಡೆಂಘೆ ಶಂಕೆ
Published on

ಹಾಸನ: ಅತಿಯಾದ ಜ್ವರದಿಂದ ಬಳಲುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಗೋಹಳ್ಳಿ ಗ್ರಾಮದ ಕುಶಾಲ್ (22) ಮೃತಪಟ್ಟ ವಿದ್ಯಾರ್ಥಿ. ಕುಶಾಲ್ ಡೆಂಘೆ ಮಹಾಮಾರಿಯಿಂದಲೇ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ಖಚಿತ ಕಾರಣ ತಿಳಿಯಲಿದೆ.
ಕಳೆದ ಒಂದು ವಾರದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲ್, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಸಾವನ್ನಪ್ಪಿದ್ದಾನೆ. ಪ್ರತಿಭಾನ್ವಿತ, ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್, ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಭವಿಷ್ಯದಲ್ಲಿ ವೈದ್ಯನಾಗಿ ಜನಸೇವೆ ಮಾಡಬೇಕು ಎಂಬ ಹಂಬ ಇಟ್ಟುಕೊಂಡಿದ್ದ ಕುಶಾಲ್, ಕಿರಿಯ ವಯಸ್ಸಿನಲ್ಲಿಯೇ ಕಣ್ಮರೆಯಾಗಿರುವುದು ಕುಟುಂಬ ವರ್ಗದವರಿಗೆ ಅತೀವ ದುಃಖ ತರಿಸಿದೆ. ವಿಪರ‌್ಯಾಸ ಎಂದರೆ ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲೇ ತಾಯಿ ರೇಖಾ ಸಹ ಡೆಂಘೆ ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟೈಲರ್ ವೃತ್ತಿ ಮಾಡುತ್ತಿರುವ ರೇಖಾ ಮತ್ತು ಶಿಕ್ಷಕರಾಗಿರುವ ತಂದೆ ಮಂಜುನಾಥ್, ತಮ್ಮ ಇತಿಮಿತಿಯ ನಡುವೆಯೂ ಮಗ ಚೆನ್ನಾಗಿ ಓದಿ ವೈದ್ಯನಾಗಲಿ, ಆ ಮೂಲಕ ನೊಂದ ಜನರಿಗೆ ವ್ಯದ್ಯ ಸೇವೆ ಸಿಗಲಿ ಎಂದು ಆಶಿಸಿದ್ದರು. ಇದಕ್ಕಾಗಿ ಎಲ್ಲಾ ರೀತಿಯ ಶ್ರಮ ತೆಗೆದುಕೊಂಡಿದ್ದರು. ಆದರೆ ತನ್ನ ಹಾಗೂ ಹೆತ್ತವರ ಆಸೆ ಈಡೇರುವ ಮುನ್ನವೇ ಕುಶಾಲ್ ಮಾರಣಾಂತಿಕ ಕಾಯಿಲೆ ಬಲಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net