ಎಂಡಿಸಿಸಿ ಬ್ಯಾಂಕ್ 5 ವರ್ಷದಲ್ಲಿ ಮೂರುಪಟ್ಟು ಸಾಧನೆ

32
Published on

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಕಳೆದ 5 ವರ್ಷದಲ್ಲಿ ದುಪ್ಪಟ್ಟು ಠೇವಣಿ ಸಂಗ್ರಹ, ಸಾಲ ವಿತರಣೆ, ಷೇರು ಬಂಡವಾಳ ಸಂಗ್ರಹಿಸಿ ಪ್ರಗತಿ ಸಾಧಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಹೇಳಿದರು.


ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.


ಬ್ಯಾಂಕ್‌ನ ಇತಿಹಾಸದಲ್ಲಿ ಕಳೆದ ಐದು ವರ್ಷದಲ್ಲಿ ಠೇವಣಿ ಸಂಗ್ರಹ, ಸಾಲ ವಿತರಣೆ ಸೇರಿದಂತೆ ಎಲ್ಲ ವಲಯದಲ್ಲೂ ಮೂರುಪಟ್ಟು ಸಾಧನೆ ಮಾಡಿದೆ. ಯಶಸ್ವಿಯಾಗಿ ದಾಪುಗಾಲು ಹಾಕುವುದರೊಂದಿಗೆ ರಾಜ್ಯದಲ್ಲೇ ಮಾದರಿ ಡಿಸಿಸಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.


ಕಳೆದ 62 ವರ್ಷದಲ್ಲಿ ಹಲವು ಏಳು ಬೀಳನ್ನು ಬ್ಯಾಂಕ್ ಕಂಡಿದೆ. ಆದರೆ, ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಅವ್ಯವಹಾರ ನಡೆದು ಬ್ಯಾಂಕ್ ಮುಚ್ಚಿ ಹೋಗುವ ಭೀತಿಗೆ ತಲುಪಿತು. ನೌಕರರು ಬೀದಿಪಾಲಾಗುತ್ತಾರೆ. ಇನ್ನೇನು ಮಾಡಲು ಸಾಧ್ಯವಿಲ್ಲ ಎನ್ನುವ ಸಂದರ್ಭದಲ್ಲಿ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೆ. ಆಗ ಸಮಸ್ಯೆಗಳು ಮತ್ತು ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲಾಯಿತು ಎಂದು ಹೇಳಿದರು.


ಕೋವಿಡ್ ಸಂಕಷ್ಟವನ್ನು ಸಮರ್ಪಕವಾಗಿ ಎದುರಿಸುವುದರೊಂದಿಗೆ ಬ್ಯಾಂಕ್‌ನ ಪ್ರಗತಿ ಸಾಧಿಸಿದ್ದು, ಎರಡು ಜಿಲ್ಲೆಯ ಆಶಾಕಾರ್ಯಕರ್ತೆಯರಿಗೆ ಸಹಾಯಧನ, ಮಾಸ್ಕ್, ಪರಿಕರ ವಿತರಿಸಲಾಯಿತು. ಸಹಕಾರ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಟ್ಟಡ ನಿರ್ಮಾಣಕ್ಕಾಗಿ ಅಪೆಕ್ಸ್ ಬ್ಯಾಂಕ್‌ನಿಂದ ಸಹಾಯಧನ ಕೊಡಿಸಲಾಗಿದೆ ಎಂದರು.


ಬ್ಯಾಂಕಿನ ವ್ಯಾಪ್ತಿಗೆ ಬರುವ ಬಿಳಿಕೆರೆ, ಹುಣಸೂರು, ಪಿರಿಯಾಪಟ್ಟಣ, ಸಾತಗಳ್ಳಿ, ಹೆಬ್ಬಾಳು, ತಲಕಾಡು, ಬನ್ನೂರು, ಸಂತೆಮರನಹಳ್ಳಿ, ಭೇರ್ಯ, ಹುಲ್ಲಹಳ್ಳಿ, ತಿ.ನರಸೀಪುರ, ಕೋಳ್ಳೇಗಾಲ, ಯಳಂದೂರು ಶಾಖೆಗಳನ್ನು ಸ್ಥಳಾಂತರ ಮಾಡಿ ಉನ್ನತೀಕರಣಗೊಳಿಸಲಾಗಿದೆ. ಬ್ಯಾಂಕ್‌ನ ವ್ಯವಹಾರವನ್ನು ಗಣಕೀಕರಣ ಮಾಡಲಾಗಿದೆ. ಖಾಸಗಿ ಬ್ಯಾಂಕ್‌ಗಳಿಗೆ ಏನು ಕಡಿಮೆ ಇಲ್ಲದಂತೆ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.


ಸಹಕಾರ ಸಂಸ್ಥೆಗಳಲ್ಲಿ ಉತ್ತಮ ಕೆಲಸ ಮಾಡಿದ ಸಹಕಾರಿಗಳು, ಬ್ಯಾಂಕ್‌ನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.


ಬ್ಯಾಂಕ್‌ನ ಉಪಾಧ್ಯಕ್ಷ ಎಂ.ಪಿ.ಸುನೀಲ್, ನಿರ್ದೇಶಕರಾದ ಅಮಿತ್ ದೇವರಹಟ್ಟಿ, ಬಿ.ಎನ್.ಸದಾನಂದ, ಕೆ.ಎಸ್.ಕುಮಾರ್, ಡಾ.ಎಂ.ಬಿ ಮಂಜೇಗೌಡ, ಎಂ.ಕುಮಾರ್, ಕೆ.ಜೆ.ಮಹೇಶ್, ಕೆಂಪಣ್ಣ, ಸಿ.ಎನ್.ರವಿ, ಎಚ್.ಸುಬ್ಬಯ್ಯ, ಎಚ್.ಜೆ. ನಾಗಪ್ರಸಾದ್, ನಾಗೇಂದ್ರಕುಮಾರ್, ಜಯರಾಮು, ಎಚ್.ಜೆ.ಶಿವರಾಜ್, ಸಹಕಾರ ಸಂಘಗಳ ಉಪ ನಿಬಂಧಕ ಮಂಜುನಾಥ್ ಸಿಂಗ್, ಬ್ಯಾಂಕ್‌ನ ಸಿಇಒ ಜೆ.ಸಿ.ಜನಾರ್ದನ್, ಪ್ರಧಾನ ವ್ಯವಸ್ಥಾಪಕ ಶಶಿಧರ್, ವ್ಯವಸ್ಥಾಪಕ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net