ಎಂಡಿಎ ಮೊದಲ ಸಭೆ: 400 ಎಕರೆ ಖಾಸಗಿ ಬಡಾವಣೆ ಅಭಿವೃದ್ಧಿಗೆ ಅನುಮೋದನೆ

muda (1)
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂಪಾಂತರಗೊಂಡಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು. ಸುಮಾರು 400 ಎಕರೆ ಖಾಸಗಿ ಬಡಾವಣೆ ಅಭಿವೃದ್ಧಿ ಪಡಿಸಲು ಅನುಮೋದನೆ ನೀಡಲಾಗಿದೆ.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನೇಕ ವಿಷಯಗಳನ್ನು ಮಂಡನೆ ಮಾಡಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ.

ಪ್ರಾಧಿಕಾರದಿಂದ ಹಂಚಿಕೆ ಮಾಡಿರುವ ಹುಡ್ಕೋ, ಇಡಬ್ಲ್ಯುಎಸ್, ಎಲ್‌ಐಜಿ, ಎಂಐಜಿ, ಎಚ್‌ಐಜಿ ಮತ್ತು ಬ್ಯಾಂಕ್ ನೆರವಿನ ಮೂಲಕ ಹಂಚಿಕೆ ಮಾಡಿರುವ ಮನೆಗಳ ಮಂಜೂರಾತಿದಾರರು ಮನೆಯ ಬಾಕಿ ಕಂತನ್ನು ಬಡ್ಡಿ ಸಹಿತ ಹಣ ಪಾವತಿಸಿ ಕ್ರಯಪತ್ರ ಪಡೆಯಲು ಗಡುವು ನಿಗದಿಗೊಳಿಸಿದ್ದು, ಈ ಕುರಿತು ಕೊನೆಯ ಅವಕಾಶ ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ.

ಹುತಾತ್ಮ ಯೋಧ ಲೇಟ್ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ಅವಲಂಬಿತರಾದ ಅಧಿತಿ ಅವರಿಗೆ 40*60 ಅಳತೆಯ ನಿವೇಶನ ಉಚಿತವಾಗಿ ಮಂಜೂರು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

ಜಮ್ಮು ಕಾಶ್ಮೀರದ ರಜೌರಿಯಲ್ಲಿ 2023ರ ನವೆಂಬರ್‌ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನ್ನಡಿಗ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸಹಿತ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇವರ ಕುಟುಂಬಕ್ಕೆ ನಿವೇಶನ ನೀಡುವಂತೆ ಸೈನಿಕ ಕಲ್ಯಾಣ ಸಮಿತಿ ಮತ್ತು ಪುನರ್ವಸತಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಮುಡಾ ಒಪ್ಪಿಗೆ ನೀಡಿದೆ.

ವಿವಿಧ ಕ್ಷೇತ್ರಗಳ ಸಾಧಕರಿಗೆ ಬಿಡಿ ನಿವೇಶನ ಹಂಚಿಕೆ ಮಾಡಲು ಮುಂದಾಗಿರುವ ಎಂಡಿಎ, ಈ ಕುರಿತು ಸ್ವೀಕೃತವಾದ ಅರ್ಜಿಗಳ ಸಂಬಂಧ ಉಪ ಸಮಿತಿ ರಚಿಸಲು ನಿರ್ಣಯ ಕೈಗೊಂಡಿದೆ.

ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಖಾಲಿ ಇರುವ ನಾಗರಿಕ ಸೌಕರ್ಯ ನಿವೇಶನಗಳನ್ನು(ಸಿಎ ಸೈಟ್) ವಿವಿಧ ಸರ್ಕಾರಿ ಹಾಗೂ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳಿಗೆ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ. ಹಾಸ್ಟೆಲ್, ಶಾಲೆ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಸಿಎ ನಿವೇಶನ ಮಂಜೂರು ಮಾಡುವ ಪ್ರಸ್ತಾವನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಅದಕ್ಕೆ ಈಗ ಮುಕ್ತಿ ಸಿಕ್ಕಿದೆ.

ಎಂಡಿಎಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಸಮರ್ಪಕವಾಗಿ ಗಣಕೀಕೃತಗೊಳಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ.

2025-26ನೇ ಸಾಲಿನ ತಾಂತ್ರಿಕ ಶಾಖೆ ಸಿದ್ಧ ಪಡಿಸಿರುವ 244 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಮೈಸೂರು-ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶದ ವಿಸ್ತರಿತ ಪ್ರದೇಶಕ್ಕೆ ಗಡಿಯ ವಿವರವನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸುವ ಬಗ್ಗೆ ಅನುಮೋದನೆ ನೀಡಿದ್ದು, ಜತೆಗೆ, ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ್ ಯೋಜನೆಯಡಿ ಜಿಐಎಸ್ ಅಡಿಯಲ್ಲಿ ಮಹಾಯೋಜನೆಯನ್ನು ಪರಿಷ್ಕರಿಸುವ ಕುರಿತು ಒಪ್ಪಿಗೆ ನೀಡಲಾಗಿದೆ.

ಸುಮಾರು 400 ಎಕರೆ ಖಾಸಗಿ ಬಡಾವಣೆಗಳಿಗೆ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಪ್ರಾಧಿಕಾರದ ಅಭಿಲೇಖಾಲಯದಲ್ಲಿರುವ ದಾಖಲೆಗಳನ್ನು ಗಣಕೀಕೃತಗೊಳಿಸಲು ನಿರ್ಣಯ ಕೈಗೊಳ್ಳಲಾಗಿರುತ್ತದೆ. ಅಲ್ಲದೆ, ಪ್ರಾಧಿಕಾರದ ಆಸ್ತಿಯನ್ನು ಸಂರಕ್ಷಿಸುವ ಸಂಬಂಧ ಮೊಬೈಲ್ ಆ್ಯಪ್ ಸಿದ್ಧಪಡಿಸುವ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಂಡಿದೆ

ಅಧ್ಯಕ್ಷರೂ ಇಲ್ಲ, ಜನಪ್ರತಿನಿಧಿಗಳೂ ಇರಲಿಲ್ಲ

ಮೊದಲ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿಲ್ಲ. ಆಡಳಿತಾತ್ಮಕ ವಿಷಯಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ.

50:50 ನಿವೇಶನ ಹಂಚಿಕೆ ಪ್ರಕರಣದಿಂದ ಈ ಸಂಸ್ಥೆ ಕಳೆಗುಂದಿತ್ತು. ತಿಂಗಳುಗಟ್ಟಲೇ ಕೆಲಸಕಾರ್ಯಗಳು ಸ್ಥಗಿತಗೊಂಡಿದ್ದವು. 2024ರ ನವೆಂಬರ್ 30ರಂದು ನಡೆದ ಸಭೆಯೇ ಕೊನೆಯ ಸಾಮಾನ್ಯ ಸಭೆಯಾಗಿತ್ತು. ಬಳಿಕ ಸರ್ಕಾರವು ಮುಡಾವನ್ನು ಎಂಡಿಎಯಾಗಿ ಪರಿವರ್ತನೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಇದು ರಚನೆಯಾದ ಮೂರು ತಿಂಗಳ ಬಳಿಕ ಇದೀಗ ಸಭೆ ನಡೆದಿದೆ.

ಈಗಲೂ ಎಂಡಿಎಗೆ ಸರ್ಕಾರ ಅಧ್ಯಕ್ಷರನ್ನು ನೇಮಿಸಿಲ್ಲ. ಒಬ್ಬರು ಶಾಸಕರು ಹಾಗೂ ಒಬ್ಬ ಮಹಿಳೆ ಸೇರಿದಂತೆ ನಿಯೋಜಿಸಲು ನಾಲ್ವರು ಸದಸ್ಯರನ್ನು ಅವಕಾಶವಿದ್ದರೂ ನಾಮನಿರ್ದೇಶನ ಮಾಡಿಲ್ಲ. ಮುಡಾ ಇದ್ದಾಗ ಅಧ್ಯಕ್ಷರು ಇಲ್ಲದಿದ್ದರೆ, ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸುತ್ತಿದ್ದರು. ಪ್ರಾಧಿಕಾರದ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್ತು ಸದಸ್ಯರು, ಸಂಸದರು ಸಭೆಗೆ ಹಾಜರಾಗುತ್ತಿದ್ದರು. ಇದೀಗ ಇವರು ಎಂಡಿಎ ಸದಸ್ಯರಲ್ಲ. ಹೀಗಾಗಿ, ಇಂದಿನ ಸಭೆಯಲ್ಲಿ ಅಧ್ಯಕ್ಷರೂ ಇರಲಿಲ್ಲ. ಜನಪ್ರತಿನಿಧಿಗಳೂ ಇರಲಿಲ್ಲ.

300 ವಿಷಯಗಳಿಗೆ ಒಪ್ಪಿಗೆ:

ಮೊದಲ ಸಭೆಯಲ್ಲಿ ಅಂದಾಜು 300 ವಿಷಯಗಳನ್ನು ಮಂಡಿಸಲಾಗಿದೆ. ಬಡಾವಣೆಗಳ ನಕ್ಷೆ ಅನುಮೋದನೆ, ನಿವೇಶನಗಳ ಪಟ್ಟಿ ಬಿಡುಗಡೆ, ಭೂ ಉಪಯೋಗ ಬದಲಾವಣೆ ಸೇರಿದಂತೆ ಹಲವಾರು ವಿಷಯಗಳಿಗೆ ಸಭೆ ಒಪ್ಪಿಗೆ ನೀಡಿದೆ.

ಎಂಡಿಎ ಮೊದಲ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ನಿರ್ವಹಿಸಿದರು. ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಅಧಿಕಾರಿಗಳೇ ಎಲ್ಲ ಜವಾಬ್ದಾರಿಯನ್ನೂ ನಿರ್ವಹಿಸಿದರು. ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಪ್ರಭಾರ ಆಯುಕ್ತ ಕೆ.ಆರ್.ರಕ್ಷಿತ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಇನ್ನಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net