

ಮಾಂಜರಿ: ರಾಜ್ಯದಲ್ಲಿ ಕರೊನಾ ಮಹಾಮಾರಿ ಹಾವಳಿ ಕೊಂಚ ನಿಯಂತ್ರಣಕ್ಕೆ ಬರುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಇನ್ನೂ ಸೋಂಕಿನ ಭಯ ಕಾಡುತ್ತಲೇ ಇದೆ. ಹಳ್ಳಿ ಜನರು ಸೂಕ್ತ ವೈದ್ಯೋಪಚಾರ ಸಿಗದೆ ಪರದಾಡುತ್ತಿದ್ದಾರೆ. ಸಮೀಪದ ಬೇಡಕಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂಟು ತಿಂಗಳಿಂದ ವೈದ್ಯಾಧಿಕಾರಿಗಳಿಲ್ಲದೆ ಜನರು ಚಿಕಿತ್ಸೆಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಪತ್ರೆಯ ಸಹಾಯಕರೇ ರೋಗಿಗಳ ತಪಾಸಣೆ ನಡೆಸುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಕೊಡಲು ವೈದ್ಯರು ಇಲ್ಲದ್ದರಿಂದ ಜನರು ಕಂಗಲಾಗಿದ್ದಾರೆ.
ವೈದ್ಯರ ನೇಮಕವಾಗದೆ ತೊಂದರೆ: ಜನರು ಆರೋಗ್ಯ ಸಮಸ್ಯೆ ಹೊತ್ತು ಆಸ್ಪತ್ರೆಗೆ ಬಂದರೆ ವೈದ್ಯರೇ ಇಲ್ಲದ್ದರಿಂದ ಗುಣಮಟ್ಟದ ಚಿಕಿತ್ಸೆ ಹಾಗೂ ಪರಿಣಾಮಕಾರಿ ಸಲಹೆ-ಸೂಚನೆ ಸಿಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಊರಿನ ಜನರಲ್ಲಿ ನಿರಾಸೆ ಮೂಡಿದೆ. ಈ ಮೊದಲಿದ್ದ ಡಾ. ಅರ್ಚನಾ ಕುಲಕರ್ಣಿ ಅವರು ಕಳೆದ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ವರ್ಗಾವಣೆಯಾಗಿದ್ದು, ಇನ್ನೂವರೆಗೂ ಬದಲಿ ವೈದ್ಯಾಧಿಕಾರಿಯನ್ನು ನೇಮಕ ಮಾಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರ್ ಸೆಂಟರ್ ಆರಂಭಕ್ಕೆ ಒತ್ತಾಯ: ಗಡಿಭಾಗದಲ್ಲಿ ಕರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬೇಡಕಿಹಾಳದಲ್ಲಿ ಸುಮಾರು 16,000 ಜನಸಂಖ್ಯೆ ಇದ್ದು, ಕರೊನಾ ಚಿಕಿತ್ಸೆಗಾಗಿ ಸೂಕ್ತ ಆಸ್ಪತ್ರೆ ಇಲ್ಲದ ಕಾರಣ ಜನರು ಚಿಕ್ಕೋಡಿ, ನಿಪ್ಪಾಣಿ, ಬೆಳಗಾವಿ ಪಕ್ಕದ ಮಹಾರಾಷ್ಟ್ರದ ಇಚಲಕರಂಜಿ ಹಾಗೂ ಕೊಲ್ಲಾಪುರ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ, ಬೇಡಕಿಹಾಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದರೆ ಬೇಡಕಿಹಾಳ, ಶಮನೇವಾಡಿ, ನೇಜ, ಚಾಂದಶಿರದವಾಡ, ಭೋಜ, ಭೋಜವಾಡಿ ಮುಂತಾದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.