ಎಂಟಿಬಿ ನಾಗರಾಜ್ ಮನವಿಗೆ ಅಸ್ತು ಎಂದ ಮುಖ್ಯಮಂತ್ರಿ

Untitled-1
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ನನ್ನ ಕ್ಷೇತ್ರಕ್ಕೆ 200 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಅನುದಾನ ದೊರೆಯಲಿಲ್ಲ. ಆದರೆ ಎಂಟಿಬಿ ಪಟ್ಟು ಹಿಡಿದು ಮೆಟ್ರೋಗಾಗಿ 2500 ಕೋಟಿ ರೂ.ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಟಿಬಿ ಪಟ್ಟಿಗೆ ಸಿಎಂ ಅಸ್ತು ಎಂದಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಹೊಸಕೋಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು. ಆದಷ್ಟು ಬೇಗ ಹೊಸಕೋಟೆಗೆ ಕಾವೇರಿ ನೀರು ಹರಿಯಲಿದೆ. ಕೇಂದ್ರದಲ್ಲಿ ಮೋದಿ ಇರುವವರೆಗೆ ದೇಶಾದ್ಯಂತ ಬಿಜೆಪಿ ಅಭಿವೃದ್ಧಿ ಪಥದಲ್ಲಿ ನಡೆೆಯುವ ಜತೆಗೆ ಹೊಸಕೋಟೆಯೂ ಅಭಿವೃದ್ಧಿ ಹೊಂದುತ್ತದೆ ಇಷ್ಟು ದೊಡ್ಡಮಟ್ಟದ ಯೋಜನೆ ಸಾಕಾರಕ್ಕೆ ಶ್ರಮಿಸಿದ ಎಂಟಿಬಿ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕಿದೆ ಎಂದು ಕರೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ್‌ಗೌಡ, ನಗರಾಧ್ಯಕ್ಷ ಡಾ.ಸಿ.ಜಯರಾಜ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ರಘುವೀರ್, ಯುವ ಮೋರ್ಚಾ ಸಂದೀಪ್, ಅಶೋಕ್, ಮುಖಂಡರಾದ ಭರತ್ ಗೌಡ, ನಾಗರಾಜ್, ಉಮೇಶ್, ಪುಟ್ಟರಾಜ್ ಮತ್ತಿತರರು ಇದ್ದರು.


ಸಚಿವರಿಂದ ಉಡುಗೊರೆ: ಬಿಬಿಎಂಪಿ ಮಾಜಿ ಸದಸ್ಯ ಎಂಟಿಬಿ ರಾಜೇಶ್ ಮಾತನಾಡಿ, ಈ ಬಾರಿಯ ಯುಗಾದಿ ಹಬ್ಬಕ್ಕೆ ಸಚಿವ ಎಂಟಿಬಿ ನಾಗರಾಜ್ ಅವರು ಹೊಸಕೋಟೆ ಜನತೆಗೆ 2500 ಕೋಟಿ ರೂ. ವೆಚ್ಚದ ಮೆಟ್ರೋ ಕಾಮಗಾರಿಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಎಂಟಿಬಿ ಕೆಲಸ ಮನೆಮನೆಗೆ ತಲುಪಿಸಿ: ಬಿಜೆಪಿ ಅಭಿವೃದ್ಧಿ ಕಾರ್ಯಗಳಿಂದ ಜನಮನ್ನಣೆ ಗಳಿಸಿದೆ, ಹೊಸಕೋಟೆ ತಾಲೂಕಿಗೆ ನೂರಾರು ಕೋಟಿ ಹಣ ತಂದು ಎಂಟಿಬಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಅವರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿ ಕ್ಷೇತ್ರದಲ್ಲಿ ಅವರನ್ನು 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆಲ್ಲಿಸುವ ಕೆಲಸವಾಗಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬಿಜೆಪಿಯಿಂದ ಅಭಿವೃದ್ಧಿ: ಸಮಗ್ರ ಅಭಿವೃದ್ಧಿ ಮೂಲಕ ಹೊಸಕೋಟೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸ್ಥಿತಿಗೆ ಬರಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ನನ್ನ ಅಧಿಕಾರಾವಧಿಯಲ್ಲಿ ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಮತ್ತಷ್ಟು ಯೋಜನೆಗಳ ಕನಸು ಕಂಡಿದ್ದು ಜನರು ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕಳೆದ ಬಾರಿ ಹೊಸಕೋಟೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹೊಸಕೋಟೆ ವರೆಗೆ ಮೆಟ್ರೋ ರೈಲು ವಿಸ್ತರಣೆಗೆ ಮನವಿ ಮಾಡಿದ್ದೆ, ಅದರಂತೆ ಮುಖ್ಯಮಂತ್ರಿಗಳು 2500 ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ವಿಸ್ತರಣೆಗೆ ಅನುಮೋದನೆ ನೀಡಿದ್ದಾರೆ ಎಂದು ಹೇಳಿದರು.
ನಗರದ ಮಧ್ಯಬಾಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ನಿಮಿಷಕ್ಕೆ 40 ವಾಹನಗಳ ಸಂಚಾರವಿದೆ, ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಪರ್ಯಾಯ ವ್ಯವಸ್ಥೆಗೆ ಮೆಟ್ರೋ ಅವಶ್ಯಕವಾಗಿದೆ ಎಂದರು. ಕಾವೇರಿ 5ನೇ ಹಂತದ ನೀರು ಹರಿಸಲೂ ಮನವಿ ನೀಡಿದ್ದು, ಅದಕ್ಕೂ ಅನುಮೋದನೆ ಸಿಗಲಿದೆ. ಬಿಬಿಎಂಪಿ ವ್ಯಾಪ್ತಿಯಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಹೊಸಕೋಟೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದ್ದು, ಆದಷ್ಟು ಬೇಗ ಕಾವೇರಿ 5ನೇ ಹಂತದ ನೀರು ಪೂರೈಸುವ ಯೋಜನೆ ಸಾಕಾರಗೊಳ್ಳಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net