

ಹಾಸನ: ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ (ಎಂಟಿಇಎಸ್) ಸಾರ್ವಜನಿಕ ಸಂಸ್ಥೆಯಾಗಿ ಉಳಿಯಬೇಕು ಹಾಗೂ ಪಾರದರ್ಶಕ ಆಡಳಿತಕ್ಕೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮೀ ರಾಜಣ್ಣ ಗೌಡ ತಿಳಿಸಿದರು.
1958ರಲ್ಲಿ ಜಿಲ್ಲೆಯ ಬಡ ಹಾಗೂ ರೈತ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಇಂಜಿನಿಯರ್ ಕಾಲೇಜು ಆರಂಭಿಸಲು ಮಡಿಕೇರಿ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಜನಪ್ರತಿನಿಧಿಗಳು, ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳು, ಲೋಕಸಭಾ ಸದಸ್ಯರು, ಎಲ್ಲಾ ಜಿಲ್ಲೆಯ ಶಾಸಕರು, ಪುರಸಭಾ , ಪಂಚಾಯಿತಿ ಸದಸ್ಯರು ಸೇರಿದಂತೆ 31 ಜನರ ನಿರ್ದೇಶಕರನ್ನು ನೇಮಿಸಿ ಅಂದಿನ ಮೈಸೂರು ಡಿವಿಜನಲ್ ಕಮಿಷನರ್ ಶಫೀದರ್ ಷಾ ಅವರನ್ನು ಎಂಟಿಇಎಸ್ ಸೊಸೈಟಿಯ ಅಧ್ಯಕ್ಷರಾಗಿ ನೇಮಿಸಲಾಯಿತು ಹಾಗೂ ಅಂದಿನ ಹಾಸನದ ಜಿಲ್ಲಾಧಿಕಾರಿ ಚಂದಪ್ಪ ಪಾಟೀಲ್ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಿ ಸಂಘ ಸಂಸ್ಥೆ ಪರವಾಗಿ 31 ಜನ ನಿರ್ದೇಶಕರನ್ನು ನೇಮಿಸಲಾಗಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಈ ಸೊಸೈಟಿ ಸ್ಥಾಪನೆಗೆ ಶೇ 50ರಷ್ಟು ಹಣವನ್ನು ಕೇಂದ್ರ ಸರ್ಕಾರ, ಶೇ.25ರಷ್ಟು ರಾಜ್ಯ ಸರ್ಕಾರ ಹಾಗೂ ಮೂರು ಜಿಲ್ಲೆಯ ರೈತರಿಂದ ಶೇಕಡ 25ರಷ್ಟು ಹಣವನ್ನು ಸಂಗ್ರಹಿಸಲಾಯಿತು. ಸುಮಾರು 40ಕ್ಕೂ ಹೆಚ್ಚು ಎಕರೆ ಜಮೀನನ್ನು ರೈತರಿಂದ ಸರ್ಕಾರ ವಶಪಡಿಸಿಕೊಂಡು ಈ ಸೊಸೈಟಿಯನ್ನು ಸಾರ್ವಜನಿಕ ಸಂಸ್ಥೆಯಾಗಿ ನೋಂದಾಯಿಸಿ ನಡೆದುಕೊಂಡು ಬರುತ್ತಿದೆ. ಇಂತಹ ಬೃಹತ್ ಸಂಸ್ಥೆಯಲ್ಲಿ ಸದಸ್ಯರಾದ ಜಿ.ಎಲ್. ಕೃಷ್ಣೆಗೌಡ, ತಿಮ್ಮೇಗೌಡ, ಸಿ.ಎಸ್ ಕೃಷ್ಣಸ್ವಾಮಿ, ಬಿ.ಬಿ. ಶಿವಪ್ಪ, ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ, ವೀರಶೈವ ಸಮಾಜದ ಅಧ್ಯಕ್ಷರಾದ ಐಸಾಮಿ ಗೌಡ ನಡೆಯುತ್ತಿರುವ ಅವ್ಯವಹಾರವನ್ನು ಹಲವು ಬಾರಿ ಪ್ರಶ್ನಿಸಿದ್ದರು. ಆದರೆ ಇದುವರೆಗೂ ಸಹ ಸಂಸ್ಥೆಯಲ್ಲಿ ಪಾರದರ್ಶಕ ಆಡಳಿತ ನಡೆಯುತ್ತಿಲ್ಲ. 2014ರ ಸಂಸ್ಥೆಯ ಚುನಾವಣೆ ಹಾಗೂ 2019ರ ಚುನಾವಣೆ ಕಾನೂನುಬಾಹಿರವಾಗಿ ನಡೆದಿದೆ ಎಂದು ಈಗಾಗಲೇ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣ ವಿಚಾರಣೆಯಲ್ಲಿದೆ ಎಂದರು.
2024ರ ಚುನಾವಣೆಯು ಹತ್ತಿರವಾಗುತ್ತಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕ ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಪಾರದರ್ಶಕ ಆಡಳಿತ ನೀಡಬೇಕು ಎಂದು ಆಗ್ರಹಿಸಿ ನಮ್ಮ ಹೋರಾಟವನ್ನು ಮುಂದುವರಿಸಿದ್ದೇವೆ. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಹಾಲಿ ಇರುವಂತಹ 24 ಪದಾಧಿಕಾರಿಗಳು ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದು ತಮಗೆ ಇಷ್ಟವಾದಂತಹ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡುತ್ತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಜಿಲ್ಲಾ ನೋಂದಣಾಧಿಕಾರಿಗಳಿಗೆ ಬೈಲಾ ವಿರುದ್ಧವಾಗಿ ಸೊಸೈಟಿಯಲ್ಲಿ ಕಾರ್ಯ ಚಟುವಟಿಕೆಗಳು ನಡೆಯುತ್ತಿದೆ ಎಂದು ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಸದ್ಯ ಸೊಸೈಟಿಯಲ್ಲಿ 528 ಸದಸ್ಯರಿದ್ದು ಕಡೆಯ ವಾರ್ಷಿಕ ಸಭೆ 2023 ಡಿ.3ರಲ್ಲಿ ನಡೆದಿದ್ದು ಬಿಟ್ಟರೆ ಇಂದಿನವರೆಗೆ ಯಾವುದೇ ಸಭೆ ಕರೆದಿಲ್ಲ. ವಾರ್ಷಿಕ ಸಭೆಯ ಪುಸ್ತಕದಲ್ಲಿ ಸಂಸ್ಥೆಯ ಸಾಮಾನ್ಯ ಅಜೀವ ಮತ್ತು ಪೋಷಕರ ಸಂಖ್ಯೆಯನ್ನು ಮುದ್ರಿಸುತ್ತಿದ್ದರು. ಆದರೆ 65ನೇ ವಾರ್ಷಿಕ ಸಭೆಯಲ್ಲಿ ಸದಸ್ಯರ ಸಂಖ್ಯೆಯನ್ನು ನಮೂದಿಸಲಿಲ್ಲ. ಈ ಸಾಲಿನ ಚುನಾವಣೆ ನಡೆಯಲಿದ್ದು ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಲು ಒಂದು ತಿಂಗಳ ಗಡುವನ್ನು ನೀಡುತ್ತಿದ್ದು ಬೇಡಿಕೆ ಈಡೇರದಿದ್ದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಕೆ ಮಂಜುನಾಥ್, ಪತ್ರಕರ್ತ ವೆಂಕಟೇಶ್, ಜಾನೆಕೆರೆ ಹೇಮಂತ್, ವಕೀಲರಾದ ಮಂಜುಳಾ, ಮೂರ್ತಿ ಇದ್ದರು.