

ಹಾಸನ: ಕಳೆದ ನಾಲ್ಕೈದು ದಿನಗಳಿಂದ ವಿವಿಐಪಿ ಪಾಸ್‌ಗಳನ್ನು ಹಿಡಿದು ಹಾಸನಾಂಬ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಹಾಸನಾಂಬ ದರ್ಶನಕ್ಕೆ ಸಾಕಷ್ಟು ಅವ್ಯವಸ್ಥೆ ಉಂಟಾಯಿತು. ಆದ್ದರಿಂದ ಗುರುವಾರ ಮಧ್ಯಾಹ್ನದಿಂದ ವಿವಿಐಪಿ, ವಿಐಪಿ ಸೇರಿ ಎಲ್ಲ ರೀತಿಯ ಪಾಸುಗಳನ್ನು ರದ್ದು ಮಾಡಲಾಯಿತು. 8ನೇ ದಿನವಾದ ಶುಕ್ರವಾರವೂ ಪಾಸ್‌ಗಳ ರದ್ದು ಮುಂದುವರಿಸಿದ ಕಾರಣದಿಂದ ಬಂದ ಭಕ್ತರು ಯಾವುದೇ ತಳ್ಳಾಟ, ನೂಕಾಟವಿಲ್ಲದೆ ಸುಸೂತ್ರವಾಗಿ ದೇವಿ ದರ್ಶನ ಪಡೆದರು.
ಶುಕ್ರವಾರ ಬೆಳಗ್ಗೆ ಭಕ್ತರ ಸಂಖ್ಯೆ ಕಡಿಮೆಯಾದ ಕಾರಣ 1 ಸಾವಿರ ರೂ. ಹಾಗೂ 300 ರೂ. ಪಾಸ್ ಮಾರಾಟ ಮುಂದುವರಿಸಲಾಯಿತು. ಪಾಸ್ ಖರೀದಿಸಿದವರು ಸರತಿ ಸಾಲಿನಲ್ಲಿ ಸುಗಮವಾಗಿ ಸಾಗಿ ದೇವಿ ದರ್ಶನ ಪಡೆದರು. ದೇವಾಲಯದ ಮುಖ್ಯ ಪ್ರವೇಶ ದ್ವಾರದ ಮುಂದೆ ಹೆಚ್ಚಿನ ಜನದಟ್ಟಣೆ ಕಾಣಿಸಿಕೊಳ್ಳದ ಕಾರಣ ವಾಹನ ಸಂಚಾರ ಕೂಡ ಎಂದಿನಂತೆ ಸಾಮಾನ್ಯವಾಗಿತ್ತು. ಧರ್ಮ ದರ್ಶನ ಸಾಲಿನಲ್ಲಿ ಹೆಚ್ಚಿನ ಜನರು ಇದ್ದರೂ ಯಾವುದೇ ಗೊಂದಲವಿಲ್ಲದೆ ಸರತಿ ಸಾಲಿನಲ್ಲಿ ಸಾಗಿ ದರ್ಶನ ಪಡೆದರು. ಜತೆಗೆ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲೂ ರಾಜಕಾರಣಿಗಳು, ಅತಿ ಗಣ್ಯ ವ್ಯಕ್ತಿಗಳು ಬಾರದ ಕಾರಣ ಎಲ್ಲವೂ ನಿರ್ವಿಘ್ನವಾಗಿ ನೆರವೇರಿತು.
ಗುರುವಾರ ರಾತ್ರಿ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಶುಕ್ರವಾರ ಮುಂಜಾನೆ ವೇಳೆಗೆ ಭಕ್ತರ ಸಂಖ್ಯೆ ಕಡಿಮೆಯಾಯಿತು. ನಂತರ ಬಂದಂತಹ ಭಕ್ತರು ಕಣ್ತುಂಬ ದೇವಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ಖುಷಿಯಿಂದ ವಾಪಸಾದರು. ಮಧ್ಯಾಹ್ನದ ನಂತರ ಭಕ್ತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಾದರೂ ಸಂತೋಷದಿಂದಲೇ ದೇವಿ ದರ್ಶನ ಮಾಡಿದರು. ಪ್ರತಿವರ್ಷದಂತೆ ದರ್ಶನದ ಕೊನೆಯ ದಿನವಾದ ಶನಿವಾರ ರಾತ್ರಿ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವವನ್ನು ಆಯೋಜನೆ ಮಾಡಲಾಗಿದೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಬೆಳಗ್ಗೆಯಿಂದ ಸಂಜೆಯವರೆಗೂ ಯಾವುದೇ ತೊಂದರೆ ಇಲ್ಲದೆ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಸಂಜೆ ಸುರಿದ ಮಳೆಯಿಂದ ಸಂಕಷ್ಟ ಎದುರಿಸುವಂತಾಯಿತು. ಸಾವಿರ ರೂ. ಪಾಸ್ ಸಾಲಿನಲ್ಲಿ ನಿಂತವರು ಮಳೆಯಲ್ಲಿ ನೆನೆಯಬೇಕಾಯಿತು. ಗುರುವಾರ ಸುರಿದ ಮುಂಜಾನೆವರೆಗೂ ದೇವಸ್ಥಾನದ ಆವರಣ ಮತ್ತು ಸುತ್ತಮುತ್ತ ಸ್ಥಳಗಳನ್ನು ನಗರಸಭೆ ಸಿಬ್ಬಂದಿ ಮತ್ತು ಸ್ಕೌಟ್ಸ್ ಆ್ಯಂಡ್ ಗೈಡ್ ವಿದ್ಯಾರ್ಥಿಗಳು ಸ್ವಚ್ಛ ಮಾಡಿದ್ದರು. ಹೊಸದಾಗಿ ಹೂವಿನ ಅಲಂಕಾರ ಕೂಡ ಮಾಡಲಾಗಿತ್ತು. ಆದರೆ, ಶುಕ್ರವಾರ ಸಂಜೆ ಮತ್ತೆ ಸುರಿದ ಮಳೆಯಿಂದಾಗಿ ಮತ್ತೆ ಕಸದ ತ್ಯಾಜ್ಯ ತುಂಬಿಕೊಂಡಿದೆ.
ಶುಕ್ರವಾರ ಕೆಲವು ಗಣ್ಯರು ಆಗಮಿಸಿ ಹಾಸನಾಂಬ ದೇವಿಯ ದರ್ಶನ ಪಡೆದರು. ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಸೇರಿದಂತೆ ಕೆಲವು ಮಠಾಧೀಶರು ಆಗಮಿಸಿ ದೇವಿಯನ್ನು ಕಣ್ತುಂಬಿಕೊಂಡರು.