ಎಂಎಸ್‌ಜಿಪಿ ತೆರವಿಗೆ ಬಿಗಿಪಟ್ಟು, ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

adfeea1b-965c-4593-8806-4457abca7c62
Published on

ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಹೋಬಳಿಯ ಚಿಗರೇನಹಳ್ಳಿ ಎಂಎಸ್‌ಜಿಪಿ ಘಟಕ ತೆರವುಗೊಳಿಸುವಂತೆ ಆರಂಭವಾಗಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಚಿಗರೇನಹಳ್ಳಿ, ಭಕ್ತರಹಳ್ಳಿ, ಸಕ್ಕರೆ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಹೋರಾಟಕ್ಕೆ ಧಮುಕಿದ್ದು, ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದೆ.

ಕಸದ ಲಾರಿಗಳಿಗೆ ತಡೆ: ಎಂಎಸ್‌ಜಿಪಿ ಘಟಕಕ್ಕೆ ಸಂಪರ್ಕ ಕಲ್ಪಿಸುವ ಗುಂಡ್ಲಹಳ್ಳಿ ಕ್ರಾಸ್ ಬಳಿ ಗ್ರಾಮಸ್ಥರು ಧರಣಿ ಮುಂದುವರಿಸಿದ್ದಾರೆ. ಬೆಂಗಳೂರಿನ ಕಸ ತುಂಬಿಕೊಂಡು ಬಂದಿದ್ದ ಹಲವು ಲಾರಿಗಳನ್ನು ಪ್ರತಿಭಟನಾಕಾರರು ತಡೆದು ಶುಕ್ರವಾರ ವಾಪಸ್ ಕಳಿಸಿದ್ದಾರೆ. ಕಸ ತುಂಬಿಕೊಂಡು ಬಂದ ಲಾರಿಗಳು ಬೆಳವಂಗಲ ರಸ್ತೆಬದಿ ನಿಂತಿದ್ದು, ವಿಷಪೂರಿತ ಗಾಳಿ ಹರಡಲಾರಂಭಿಸಿದೆ. ಖುದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನೇತೃತ್ವದ ನಿಯೋಗ ಎಂಎಸ್‌ಜಿಪಿ ಘಟಕ ಪರಿಶೀಲಿಸಿತು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಧರಣಿ ಕೈ ಬಿಡುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ಒಪ್ಪಲಿಲ್ಲ.

ಜಿಲ್ಲಾಡಳಿತಕ್ಕೆ ತಲೆ ಬಿಸಿ: ಮತ್ತೊಂದೆಡೆ ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಹಾಗೂ ಇತರ ಅಧಿಕಾರಿಗಳ ತಂಡ ದೊಡ್ಡಬಳ್ಳಾಪುರಕ್ಕೆ ದೌಡಾಯಿಸಿತು. ಜಿಲ್ಲಾಧಿಕಾರಿ ನೇತೃತ್ವದ ತಂಡ ಬಿಬಿಎಂಪಿ ಅಧಿಕಾರಿಗಳ ಜತೆ ಸಭೆ ನಡೆಸಿದರು. ಏನನ್ಮಧ್ಯೆ ಎಂಎಸ್‌ಜಿಪಿ ಮುಚ್ಚುವಂತೆ ಘೋಷಣೆ ಮುಗಿಲುಮುಟ್ಟುತ್ತಿದ್ದು, ಜಿಲ್ಲಾಡಳಿತಕ್ಕೆ ತಲೆಬಿಸಿ ತರಿಸಿದೆ.

ಪೊಲೀಸರೊಂದಿಗೆ ಜಟಾಪಟಿ: ಶುಕ್ರವಾರ ಪ್ರತಿಭಟನಾಕಾರರನ್ನು ಪೊಲೀಸ್ ಠಾಣೆಯಲ್ಲಿ ಚರ್ಚೆಗೆ ಕರೆದ ಹಿನ್ನೆಲೆಯಲ್ಲಿ ಕೆಲಹೊತ್ತು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಕಸ ವಿಲೇವಾರಿ ಕಾರ್ಯಕ್ರಮಗಳ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಚರ್ಚಿಸಲು ಕರೆದಿದ್ದರು. ಈ ವೇಳೆ ಪ್ರತಿಭಟನಾಕಾರರು, ಪೊಲೀಸ್ ಠಾಣೆಯಲ್ಲಿ ಚರ್ಚೆಗೆ ಬರುವುದಿಲ್ಲ. ಏನೇ ಚರ್ಚೆ ನಡೆದರೂ ಇಲ್ಲೇ ನಡೆಯಲಿ ಎಂದು ಪಟ್ಟು ಹಿಡಿದರು. ಈ ವಿಚಾರಕ್ಕೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಜಟಾಪಟಿ ನಡೆಯಿತು.

ಮಾಲೀಕನನ್ನು ಬಂಧಿಸುವಂತೆ ಆಗ್ರಹ: ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದಾಗಿರುವ ಅವಾಂತರಗಳಿಗೆ ಲೆಕ್ಕವಿಲ್ಲ. ಇಲ್ಲಿನ ಐತಿಹಾಸಿಕ ಮಾವತ್ತೂರು ಕೆರೆ ಸೇರಿ ಬಹುತೇಕ ಕೆರೆಗಳು ವಿಷಯುಕ್ತವಾಗಿವೆ. ಇದರಿಂದಾಗಿ ಅಂತರ್ಜಲ ವಿಷಗೊಂಡಿದ್ದು, ಆ ವಿಷಯುಕ್ತ ನೀರಿನಿಂದ ಗಂಭೀರ ಆರೋಗ್ಯ ಸಮಸ್ಯೆಗಳು ತಲೆದೋರಿವೆ, ಇಲ್ಲಿನ ಭೂ ಜಲ, ವಾತಾವರಣವನ್ನು ವಿಷಯುಕ್ತ ಮಾಡಿರುವ ಎಂಎಸ್‌ಜಿಪಿ ಮಾಲೀಕ ಕೆ.ಪಿ.ಪ್ರವೀಣ್ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬಿಬಿಎಂಪಿ ಘನತ್ಯಾಜ್ಯ ವಿಶೇಷ ಆಯಕ್ತರು ಈ ಕುರಿತು ದೂರು ದಾಖಲು ಮಾಡಿಕೊಂಡು ಇಲ್ಲಿ ಸಂಭವಿಸಿರುವ ಅವಾಂತರಗಳನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ತಿಳಿಸಿದರು.

ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ, ನವ ಬೆಂಗಳೂರು ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜಿ.ಎನ್.ಪ್ರದೀಪ್‌ಕುಮಾರ್, ಭಕ್ತರಹಳ್ಳಿ ಗ್ರಾಪಂ ಸದಸ್ಯ ಗಂಗಹನುಮಯ್ಯ, ಸಕ್ಕರೆ ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಗೀತಾ ಗೋವಿಂದರಾಜು, ಗ್ರಾಪಂ ಸದಸ್ಯೆ ಶ್ರೀಲತಾ, ಪ್ರತಿಮಾ ಉಮೇಶ್, ಹನುಮಂತೇಗೌಡ, ಕೃಷ್ಣಮೂರ್ತಿ, ರವಿಕುಮಾರ್ ರಾಜಣ್ಣ, ಪ್ರಸನ್ನ, ಲಕ್ಷ್ಮಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net