

ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಂಎಸ್ಎಂಇ ಆರ್ಥಿಕ ಪುನಶ್ಚೇತನಕ್ಕೆ ಘೊಷಣೆ ಮಾಡಿರುವ ಕ್ರಮಗಳ ಕುರಿತು ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ರ್ಚಚಿಸಲಾಯಿತು.
ಕರೊನಾ ಹಿನ್ನೆಲೆಯಲ್ಲಿ ಉದ್ದಿಮೆದಾರರು ಹೆಚ್ಚಿನ ಸಾಲ ಪಡೆಯಬೇಕಾದ ಸಂದರ್ಭದಲ್ಲಿ ಇರುವ ಅರ್ಹತೆಗಳ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ವಿವರಿಸಿದರು.
ಈಗಾಗಲೇ ಉದ್ದಿಮೆದಾರರು ಸಾಲ ಪಡೆದಲ್ಲಿ 25 ಕೋಟಿ ರೂ. ವರೆಗೆ ಬಾಕಿ ಇರುವ ಉದ್ದಿಮೆಗಳು ಕೂಡ ಹೆಚ್ಚಿನ ಸಾಲ ಪಡೆಯಲು ಅರ್ಹರಿದ್ದು, ಅವರು ಈ ಮೊದಲು ಪಡೆದ ಸಾಲದ ಮೇಲೆ ಸಲ್ಲಿಸಿರುವ ದಾಖಲಾತಿಗಳನ್ನು ಹೆಚ್ಚುವರಿಯಾಗಿ ಯಾವುದೇ ಅಡಮಾನ ಹಾಗೂ ಭದ್ರತೆ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಸಾಲ ಮರುಪಾವತಿ ಕಂತಿನ ಅವಧಿಯನ್ನು 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಸಾಲ ಪಡೆಯಬಯಸುವ ಉದ್ದಿಮೆದಾರರು ಕೇವಲ ಒಂದು ಪುಟದ ಮಾಹಿತಿ ಪೂರೈಸಿದರೆ ಸಾಕು. ಗರಿಷ್ಠ ಸಾಲದ ಮೇಲಿನ ಬಡ್ಡಿದರ 9.25ಕ್ಕೆ ಮೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಗ್ಯಾರಂಟೆಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ಮುಖಾಂತರ ಕೂಡ ಹೆಚ್ಚುವರಿ ಸಾಲ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ 5 ಕೋಟಿ ರೂ. ವರೆಗೆ ಸಾಲ ಪಡೆಯಲು ಅರ್ಹರಿರುತ್ತಾರೆ. ಸಾಲ ಪಡೆಯುವ ಅವಧಿ ಬರುವ ಅಕ್ಟೋಬರ್ 31ರವರೆಗೆ ಇರುತ್ತದೆ. ಜಿಇಸಿಎಲ್ ಮುಖಾಂತರ ಪಡೆದ ಸಾಲದ ಅವಧಿ 4 ವರ್ಷದವರೆಗೆ ಇರುತ್ತದೆ. ಮುಂಚಿತವಾಗಿ ಹಣ ಪಾವತಿಸಿದಲ್ಲಿ ಯಾವುದೇ ದಂಡ ಶುಲ್ಕ ಭರಿಸಬೇಕಾಗಿಲ್ಲ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ, ಬ್ಯಾಂಕ್ ಆಫ್ ಬರೋಡ ಲೀಡ್ ಬ್ಯಾಂಕ್, ಕಾಪೋರೇಷನ್ ಬ್ಯಾಂಕ್ ವಲಯ ಕಚೇರಿ ಅಧಿಕಾರಿ, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಬ್ಯಾಂಕ್ ಆಫ್ಇಂಡಿಯಾ, ಯುಕೋ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಲೆಕ್ಕ ಪರಿಶೋಧಕರಾದ ಸಮೀರ ಓಸ್ವಾಲ, ಪ್ರಕಾಶ ಕಡೂರ, ವಿನಾಯಕ ಭಟ್, ಜಿ.ವಿ. ದೇಸಾಯಿ, ಗಿರೀಶ ಕುಲಕರ್ಣಿ, ವೈ.ಎಂ. ಖಟಾವಕರ, ಉದ್ಯಮಿಗಳಾದ ಎಂ.ವಿ. ಕರಮರಿ, ಸಂದೀಪ ಬಿಡಸಾರಿಯಾ, ಕಮಲನಯನ ಮೆಹತಾ, ಬ್ಯಾಂಕ್ ಅಧಿಕಾರಿಗಳಾದ ಜೆ.ಸಿ. ಚಂದ್ರಾ, ಈಶ್ವರನಾಥ, ಭೀಮಪ್ಪ, ಗೋಪಿಕುಮಾರ, ಎಸ್.ಎಂ. ಸುನೀಲ, ಎಂ ಎಂ. ಮಧುಸೂಧನ, ಎಸ್.ವಿ. ಗೋಪಿನಾಥ, ಸಂಜೀವ ಎಸ್.ಜಿ., ಸುದರ್ಶನ ಯಾದವ, ಕೆ. ರೂಪೇಶ, ರಶೀದ ಅಹ್ಮದ್, ಕೆ. ಶೋಭಾರಾಣಿ, ಪವನ ದೇಶಪಾಂಡೆ, ಕೆಸಿಸಿಐ ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಜೊತೆ ಗೌರವ ಕಾರ್ಯದರ್ಶಿ ಉಮೇಶ ಗಡ್ಡದ ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿದರು.