ಎಂಎಸ್ಪಿಗಿಂತ ಮಾರ್ಕೆಟ್ ಬೆಲೆ ಬೆಸ್ಟ್

bilijola
Published on

ವಿಜಯವಾಣಿ ವಿಶೇಷ ಬೀದರ್

ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯಲ್ಲಿ ತೊಗರಿ, ಕಡಲೆ ಖರೀದಿ ಬೆನ್ನಲ್ಲೇ ಇದೀಗ ಬಿಳಿ ಜೋಳ ಖರೀದಿಗೂ ಅವಕಾಶ ಸಿಕ್ಕಿದೆ. ಆದರೆ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿಯೇ ಉತ್ತಮ ದರವಿದೆ. ಹೀಗಾಗಿ ಸದ್ಯದ ಮಟ್ಟಿಗೆ ಎಂಎಸ್ಪಿ ಯೋಜನೆ ನಿಷ್ಪ್ರಯೋಜಕ ಎಂಬಂತಾಗಿದೆ.

ಎಂಎಸ್ಪಿಯಲ್ಲಿ ಬಿಳಿ ಜೋಳ ಖರೀದಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ ದರ ನಿಗದಿ ನೋಡಿದರೆ ಇದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರತಿ ಕ್ವಿಂಟಾಲ್ ಜೋಳಕ್ಕೆ ರೂ. 2620 ಹಾಗೂ ರೂ. 2640 ಎರಡು ರೀತಿಯಲ್ಲಿ ದರ ನಿಗದಿ ಮಾಡಲಾಗಿದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ರೂ. 3200 ರಿಂದ 4 ಸಾವಿರ ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ನಾಮಕೆವಾಸ್ತೆ ಎನ್ನುವಂತೆ ಖರೀದಿ ಕೇಂದ್ರ ತೆರೆಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನಲ್ಲಿ ಬೆಳೆದ ಉತ್ತಮ ಗುಣಮಟ್ಟದ (ಎಫ್ಎಕ್ಯೂ) ಬಿಳಿ ಜೋಳ ಹೈಬ್ರಿಡ್ ಮತ್ತು ಬಿಳಿಜೋಳ ಮಾಲ್ದಂಡಿ ನೋಂದಾಯಿತ ರೈತರಿಂದ ನೇರವಾಗಿ ಖರೀದಿಸಲು ಜಿಲ್ಲಾ ಟಾಸ್ಕ್ ಫೋಸ್೯ ಸಮಿತಿ ನಿರ್ಧರಿಸಿದೆ. ಯೋಜನೆ ಕಾರ್ಯಾಚರಣೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ನಿರ್ವಹಿಸಲಾಗಿದೆ.

ಬಿಳಿ ಜೋಳ ಹೈಬ್ರಿಡ್ ಗೆ ರೂ. 2620 ಹಾಗೂ ಬಿಳಿಜೋಳ ಮಾಲ್ದಂಡಿಗೆ ರೂ. 2640 ದರ ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ ಕೇವಲ ಐದು ಕೇಂದ್ರಗಳನ್ನು ತೆರೆಯಲಾಗಿದೆ. ನಗರದ ಮೈಲೂರಿನ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ (9482872583), ಔರಾದ್ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿಗಮದ ಸಗಟು ಮಳಿಗೆ (9448569155), ಬಸವಕಲ್ಯಾಣ ನಗರದ ಕೆಐಎಡಿಬಿಯಲ್ಲಿನ ನಿಗಮದ ಮಳಿಗೆ (9740492482), ಭಾಲ್ಕಿ ಪಟ್ಟಣದ ಎಪಿಎಂಸಿ ಆವರಣದಲ್ಲಿನ ನಿಗಮದ ಮಳಿಗೆ (9482872583) ಹಾಗೂ ಹುಮನಾಬಾದ್ ಪಟ್ಟಣದ ಹಣಕುಣಿ ರಸ್ತೆಯಲ್ಲಿನ ನಿಗಮದ ಸಗಟು ಮಳಿಗೆ (8884563795)ಯಲ್ಲಿ ಕೇದ್ರ ತೆರೆಯಲಾಗಿದ್ದು, ಇಲ್ಲಿ ಬಿಳಿಜೋಳ ಖರೀದಿಗೆ ನೋಂದಣಿ ಮಾಡಿಸಿ, ಮಾರಾಟ ಮಾಡಬಹುದು.

ಫೆ.24ರಿಂದ ನೋಂದಣಿ ಆರಂಭವಾಗಿದ್ದು, ಮಾ.15 ಕೊನೇ ದಿನ. ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಖರೀದಿ ಪ್ರಕ್ರಿಯೆ ನಡೆಯಲಿದೆ. ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ನೋಂದಣಿ ನಡೆಯಲಿದೆ. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಫ್ರೂಡ್ಸ್ ಐಡಿ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ), ಆಧಾರ್ ಕಾಡ್೯, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್ ಮುಖಪುಟದ ಛಾಯಾ ಪ್ರತಿಯೊಂದು ಕೇಂದ್ರದಲ್ಲಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು. ಒಂದು ವೇಳೆ ಫ್ರೂಡ್ಸ್ ಐಡಿ ಲಭ್ಯವಿಲ್ಲದಿದ್ದಲ್ಲಿ ನೋಂದಾಯಿಸಲು ಅವಕಾಶ ಇಲ್ಲ.

ದಲ್ಲಾಳಿ ಬಂದ್ರೆ ಬೀಳುತ್ತದೆ ಕೇಸ್
ಖರೀದಿ ಕೇಂದ್ರದಲ್ಲಿ ರೈತರು ನೇರವಾಗಿ ಬಂದು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಮಧ್ಯವರ್ತಿಗಳು, ದಲ್ಲಾಳಿ ಅಥವಾ ಏಜೆಂಟ್ ಗಳು ಖರೀದಿ ಕೇಂದ್ರಗಳಿಗೆ ಬಿಳಿ ಜೋಳ ತಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಬೆಂಬಲ ಬೆಲೆ ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ಆಯಾ ತಹಸೀಲ್ದಾರ್, ಆಹಾರ ಇಲಾಖೆ ಉಪ ನಿರ್ದೇಶಕರು, ವ್ಯವಸ್ಥಾಪಕರು, ಕೃಷಿ ಅಧಿಕಾರಿ, ಎಪಿಎಂಸಿ ಕಾರ್ಯದರ್ಶಿ ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

75 ಸಾವಿರ ಕ್ವಿಂಟಾಲ್ ಖರೀದಿ
ತೊಗರಿ, ಕಡಲೆ ಸೇರಿದಂತೆ ವಿವಿಧ ಧಾನ್ಯ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಮೀತಿ ಹಾಕಲಾಗಿದೆ. ಆದರೆ ಇದೇ ಮೊದಲ ಬಾರಿ ಬಿಳಿ ಜೋಳ ಖರೀದಿಗೆ ಯಾವುದೇ ಮಿತಿ ಹಾಕಿಲ್ಲ. ರೈತರು ಎಷ್ಟು ಬೇಕಾದರೂ ಕೇಂದ್ರದಲ್ಲಿ ಮಾರಾಟ ಮಾಡಬಹುದು. ಆದರೆ ಜಿಲ್ಲೆಗೆ ಮಿತಿ ಹಾಕಿದ್ದು, ಒಟ್ಟು 75 ಸಾವಿರ ಕ್ವಿಂಟಾಲ್ ಖರೀದಿಗೆ ಸರ್ಕಾರ ಗುರಿ ನಿಗದಿಪಡಿಸಿದೆ.

ಸ್ಯಾಂಪಲ್ ನೀಡುವುದು ಕಡ್ಡಾಯ
ನೋಂದಾಯಿತ ರೈತರು ಖರೀದಿ ಕೇಂದ್ರಗಳಿಗೆ ಬಿಳಿ ಜೋಳ ಹೈಬ್ರಿಡ್ ಮತ್ತು ಬಿಳಿಜೋಳ ಮಾಲ್ದಂಡಿ ಮಾದರಿ (ಸ್ಯಾಂಪಲ್) ಕಡ್ಡಾಯ ನೀಡಬೇಕು. ಬಿಳಿ ಜೋಳದ ಗುಣಮಟ್ಟ ಖರೀದಿ ಪ್ರಕ್ರಿಯೆ ನಡೆಯಲಿದೆ. 50 ಕೆಜಿ ಸಾಮಥ್ರ್ಯದ ಗೋಣಿ ಚೀಲದಲ್ಲಿ ಖರೀದಿ ಕೇಂದ್ರಕ್ಕೆ ತರಬೇಕು. ರೈತರು ತಮ್ಮ ಚೀಲದಲ್ಲಿ ತಂದು ಖರೀದಿ ಕೇಂದ್ರಗಳಿಗೆ ಸಲ್ಲಿಸಿದಾಗ, ಪ್ರತಿ ಚೀಲಕ್ಕೆ ರೂ. 22ರಂತೆ ಡಿಬಿಟಿ ವ್ಯವಸ್ಥೆಯಲ್ಲಿ ರೈತರಿಗೆ ಹಣ ಪಾವತಿಯಾಗಲಿದೆ. ಕೇಂದ್ರದಲ್ಲಿ ಸರಬರಾಜು ಮಾಡಿದ ರೈತರಿಗೆ ಕೃಷಿ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಬ್ಯಾಂಕ್ ಖಾತೆಗೆ ನೇರ ಲಾಭ ವರ್ಗಾವಣೆ ವ್ಯವಸ್ಥೆ (ಡಿಬಿಟಿ) ಮೂಲಕ ಹಣ ಪಾವತಿಯಾಗಲಿದೆ.

ಬಿಳಿ ಜೋಳ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಮಾ.15 ಕೊನೆಯ ದಿನವಿದೆ. ಜಿಲ್ಲೆಯಲ್ಲಿ 5 ಕೇಂದ್ರ ಸ್ಥಾಪಿಸಲಾಗಿದೆ. ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಖರೀದಿ ನಡೆಯಲಿದೆ. ಬೆಂಬಲ ಬೆಲೆ ಯೋಜನೆ ಲಾಭ ರೈತರು ಪಡೆದುಕೊಳ್ಳಬೇಕು.| ಬಾಬುರೆಡ್ಡಿಆಹಾರ ಇಲಾಖೆ ಉಪ ನಿರ್ದೇಶಕ

ಬೆಂಬಲ ಬೆಲೆ ಯೋಜನೆಯಲ್ಲಿ ಬಿಳಿ ಜೋಳ ಖರೀದಿಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ದರ ತೀರ ಕಮ್ಮಿ ನಿಗದಿ ಮಾಡಲಾಗಿದೆ. ಪ್ರತಿ ಕ್ವಿಂಟಾಲ್ ಗೆ ಕನಿಷ್ಠ 5 ಸಾವಿರ ರೂ. ದರ ನಿಗದಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡು ರೈತಪರ ಕಾಳಜಿ ಪ್ರದರ್ಶಿಸಬೇಕು.| ಸಿದ್ರಾಮಪ್ಪ ಆಣದೂರೆರೈತ ಸಂಘ (ಕೋಡಿಹಳ್ಳಿ ಬಣ) ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net