

ಹಾಸನ: ಜಿಲ್ಲೆಯಲ್ಲಿ ಉಳಿದಿರುವ ಕೊಬ್ಬರಿಯನ್ನು ಎಂಎಸ್‌ಪಿ ದರದಲ್ಲಿ ಖರೀದಿ ಮಾಡುವ ಮೂಲಕ ಕೇಂದ್ರ ಸರ್ಕಾರ ಕೊಬ್ಬರಿ ಬೆಳಗಾರರಿಗೆ ನೆರವಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಶಾಸಕ ಹಾಗೂ ಗೃಹ ಮಂಡಳಿ ನಿಗಮದ ಅಧ್ಯಕ್ಷ ಕೆ.ಎಂ ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೆಂಗು ಬೆಳೆಗಾರರು ಹಾಗೂ ರೈತರಿಗೆ ದ್ರೋಹ ಮಾಡುತ್ತಿದೆ. ಹಾಸನ ಜಿಲ್ಲೆಯಲ್ಲಿ ಒಟ್ಟು 18,879 ಜನ ನೋಂದಾಯಿತ ಕೊಬ್ಬರಿ ಬೆಳೆಗಾರರಿದ್ದು 3,62,000 ಕ್ವಿಂಟಲ್ ಕೊಬ್ಬರಿ ಬೆಳೆಯಲಾಗಿದೆ. ಆದರೆ ಕೇಂದ್ರ ಸರ್ಕಾರ ಪ್ರತಿ ರೈತರಿಂದ ಕೇವಲ 15 ಕ್ವಿಂಟಲ್ ಕೊಬ್ಬರಿ ಖರೀದಿಗೆ ಸೀಮಿತ ಮಾಡಿದೆ. ಇದರಿಂದ ತೆಂಗು ಬೆಳಗಾರರಿಗೆ ಅನ್ಯಾಯ ಆಗಿದೆ. ಜಿಲ್ಲೆಯಲ್ಲಿ ಈಗಾಗಲೇ ನಫೆಡ್ ಮೂಲಕ 2,20,000 ಕ್ವಿಂಟಲ್ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಇನ್ನೂ 1,42,000 ಕ್ವಿಂಟಲ್ ಕೊಬ್ಬರಿ ಬಾಕಿ ಉಳಿದಿದ್ದು ಖರೀದಿ ಪ್ರಮಾಣ ಹೆಚ್ಚಿಸಿ ಉಳಿಕೆ ಕೊಬ್ಬರಿ ಖರೀದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಹಾಸನ ಜಿಲ್ಲೆಯಲ್ಲಿ ರೈತರು ಪಡಬಾರದ ಕಷ್ಟ ಪಟ್ಟು ತಾವು ಬೆಳೆದ ಅರ್ಧದಷ್ಟು ಕೊಬ್ಬರಿ ಮಾರಾಟ ಮಾಡಿದ್ದಾರೆ. ಇಡೀ ರಾತ್ರಿ ಸರತಿ ಸಾಲಿನಲ್ಲಿ ನಿಂತು ರೈತರು ಕಷ್ಟ ಅನುಭವಿಸಿ ಕೊಬ್ಬರಿ ಮಾರಿದ್ದಾರೆ. ವಾರ್ಷಿಕ ಉತ್ಪಾದನೆಯಾದ ಕೊಬ್ಬರಿಯಲ್ಲಿ ಇನ್ನೂ 1.30 ಲಕ್ಷ ಕ್ವಿಂಟಲ್ ಕೊಬ್ಬರಿ ಉಳಿದಿದೆ. ಕೇಂದ್ರ ಸರ್ಕಾರಕ್ಕೆ ಇದು ದೊಡ್ಡ ಇದೇನು ದೊಡ್ಡ ವಿಷಯವಲ್ಲ. ಕೇಂದ್ರ ಮನಸ್ಸು ಮಾಡಿ ಶೀಘ್ರವೇ ಎಲ್ಲಾ ಕೊಬ್ಬರಿ ಖರೀದಿಸಬೇಕು. ಇಡೀ ರಾಜ್ಯದಲ್ಲಿ 3 ಲಕ್ಷ ಹೆಚ್ಚುವರಿ ಕೊಬ್ಬರಿ ಖರೀದಿಸಿದರೆ ಇವರ ಮನೆಯ ಗಂಟೇನು ಹೋಗುವುದಿಲ್ಲ. ಜೆಡಿಎಸ್ ನವರೂ ಈಗ ಬಿಜೆಪಿ ಜತೆ ಇದ್ದಾರಲ್ಲ. ಅವರೂ ಹೋಗಿ ಎಲ್ಲಾ ಕೊಬ್ಬರಿ ಖರೀದಿಸುವಂತೆ ಒತ್ತಾಯಿಸಲಿ. ಒಬ್ಬ ಸಂಸದ ಆದವರು ತಮ್ಮ ಜವಾಬ್ದಾರಿ ಏನು ಎಂದು ತೋರಲಿ. ಇಲ್ಲಿ ಬಂದು ರೈತರಿಗೆ ಸಮಾಧಾನ ಮಾಡಿ ನೀರು ಹಂಚುವುದಲ್ಲ ಎಂದು ಪರೋಕ್ಷವಾಗಿ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ವಾಗ್ದಾಳಿ ನಡೆಸಿದರು.
ಕಳೆದ ಬಾರಿಯ ಚುನಾವಣೆ ವೇಳೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇತ್ತು. ಈ ಬಾರಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಒಕ್ಕೊರಲಿನಿಂದ ಹಾಸನದ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲದಿಂದ ಶ್ರೇಯಸ್ ಪಟೇಲ್ ಆಯ್ಕೆಯಾಗಿದ್ದಾರೆ. ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ, ಶಿವಕುಮಾರ್ ಈಗಾಗಲೇ ಎರಡು ಬಾರಿ ಜಿಲ್ಲೆಗೆ ಬಂದಿದ್ದಾರೆ. ಚುನಾವಣೆ ವೇಳೆ ಮತ್ತೆ ಬರುತ್ತಾರೆ. ಕ್ಷೇತ್ರವಾರು ಪ್ರವಾಸ ಮಾಡಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಇತರರು ಉಪಸ್ಥಿತರಿದ್ದರು.