

ಹೊನ್ನಾಳಿ: ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಬಾರ್‌ನ ಪರವಾನಗಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ತರಗನಹಳ್ಳಿ ಗ್ರಾಮಸ್ಥರು ಬಾರ್‌ಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ದೇವಸ್ಥಾನ, ಶಾಲೆ ಹಾಗೂ ಕಿರು ಆರೋಗ್ಯ ಸಹಾಯಕಿಯರ ವಸತಿಗೃಹಗಳಿವೆ. ಇಲ್ಲಿನ ಹೆಣ್ಣುಮಕ್ಕಳು ಓಡಾಡುವುದೇ ದುಸ್ತರವಾಗಿದೆ. ಇಲ್ಲಿ ಬಾರ್ ಬೇಡ ಎಂದು ಹಲವಾರು ಬಾರಿ ಹೇಳಿದ್ದರೂ ಬಾರ್ ಮುಂದುವರಿಸಲಾಗಿದೆ. ರಸ್ತೆ ಅಕ್ಕಪಕ್ಕ ಹಾಗೂ ಜಮೀನಿನಲ್ಲಿ ಕುಳಿತು ಕುಡಿದು ಅಲ್ಲೇ ಬಾಟಲ್ ಬಿಸಾಡಿ ಹೊಗುತ್ತಿದ್ದು, ಮಹಿಳೆಯರು ರಸ್ತೆಯಲ್ಲಿ ಓಡಾಡದ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದರು.
ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ಚೇತನ್, ನೀವು ಬೀಗ ಹಾಕುವುದು ತಪ್ಪು. ನಿಮ್ಮ ಮೇಲೆ ದೂರು ದಾಖಲು ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದಂತೆ ಗ್ರಾಮಸ್ಥರು ಒಟ್ಟಾಗಿ ಪ್ರಕರಣ ದಾಖಲು ಮಾಡಿಯೇ ಹೋಗಬೇಕು ಎಂದು ಪಟ್ಟು ಹಿಡಿದಾಗ ಇನ್ಸ್‌ಪೆಕ್ಟರ್ ವಾಪಸ್ ಮರಳಿದ್ದಾರೆ.
ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷ ರಮೇಶ್‌ಗೌಡ, ಗ್ರಾಮದ ಮುಖಂಡರಾದ ಚಂದ್ರಪ್ಪ, ಸಿದ್ದಲಿಂಗಪ್ಪ, ರಮೇಶ್‌ಗೌಡ, ಟಿ.ಶೇಖರಪ್ಪ, ಮಲ್ಲಿಕಾರ್ಜುನ್, ಎಂ.ಪಂಚಪ್ಪ, ಕರಿಬಸಪ್ಪ, ರಾಜು, ಶೇಖರಪ್ಪ, ಟಿ.ಜಿ.ಕೃಷ್ಣ, ಬಸವನಗೌಡ, ಮಲ್ಲಿಕಾರ್ಜುನ ಇದ್ದರು.