

ಚಿತ್ರದುರ್ಗ: ಬಾಲ ಗರ್ಭಿಣಿ ಪ್ರಕರಣ ಪತ್ತೆಯಾದ ತಕ್ಷಣ ಮೆಡಿಕೋ ಲೀಗಲ್ ಕೇಸ್ (ಎಂಎಲ್‌ಸಿ) ಯೊಂದಿಗೆ ಎಫ್‌ಐಆರ್ ದಾಖಲಿಸಬೇಕು. ನಿರ್ಲಕ್ಷಿಸಿದರೆ ಕಠಿಣ ಕ್ರಮ ಖಚಿತವೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.
ಈಚೆಗೆ ಬೆಂಗಳೂರಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಡಿಸಿ, ಸಿಇಒ ಸಮ್ಮೇಳನದಲ್ಲಿ ಚರ್ಚೆಯಾದ ವಿಷಯಗಳ ಕುರಿತಂತೆ ಡಿಸಿ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಅನುಪಾಲನಾ ಸಭೆಯಲ್ಲಿ ಮಾತನಾಡಿದರು.
2022-23ನೇ ಸಾಲಿನಲ್ಲಿ ಬೆಳಕಿಗೆ ಬಂದ 806 ಬಾಲ ಗರ್ಭಿಣಿಯರ ಪ್ರಕರಣಗಳಿಗೆ ಸಂಬಂಧಿಸಿದ ವೈದ್ಯಾಧಿಕಾರಿಗಳು ಯಾಕೆ ಎಂಎಲ್‌ಸಿ ಮಾಡಿಲ್ಲ? ಆರ್‌ಸಿಎಚ್ ತಂತ್ರಾಂಶದಲ್ಲಿ ನೋಂದಾಯಿಸಿದರೆ ಸಾಲದು. ಎಂಎಲ್‌ಸಿ ಮಾಡಿದರೆ, ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದ ಅವರು, ಎಂಎಲ್‌ಸಿ ಮಾಡದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 2022-23, 2023-24 ಹಾಗೂ 2024-25 ಸಾಲಿನಲ್ಲಿ ಪತ್ತೆಯಾದ ಬಾಲ ಗರ್ಭಿಣಿ ಪ್ರಕರಣಗಳಿಗೆ-ಬಾಲ್ಯ ವಿವಾಹಕ್ಕೂ ಸಂಬಂಧ ಹೊಂದಿವೆ. ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಿಡಿಪಿಒಗಳು ಕಚೇರಿಯಲ್ಲಿ ಕೂರದೆ ಬಾಲ್ಯವಿವಾಹ ತಡೆಗೆ ಪ್ರಯತ್ನಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಶಿಕ್ಷಣ, ಕಾರ್ಮಿಕ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಬಾಲ್ಯವಿವಾಹ ಪಿಡುಗು ನಿರ್ಮೂಲನೆ ಸಾಧ್ಯವಾಗಲಿದೆ ಎಂದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಬಾಲ್ಯ ವಿವಾಹ ತಡೆ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ, ಗ್ರಾಮಗಳಲ್ಲಿ ಕಾವಲು ಸಮಿತಿಗಳನ್ನು ತಪ್ಪದೆ ನಡೆಸಬೇಕು. ಶಾಲಾ-ಕಾಲೇಜುಗಳಲ್ಲಿ ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿ ಪಿಡುಗಿನ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿವೇಶನದ ಸಮಸ್ಯೆಯನ್ನು ವಾರದೊಳಗೆ ಬಗೆಹರಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಭಾರತಿ ಆರ್.ಬಣಕಾರ್ ಅವರಿಗೆ ತಾಕೀತು ಮಾಡಿದರು.
ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳ ಮೂಲಕ ಸಿಂಧುತ್ವ ಪ್ರಮಾಣ ಪತ್ರ ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಡಿಸಿ ಸೂಚಿಸಿದರು.
ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಎಲ್ಲ ವಿದ್ಯಾರ್ಥಿಗಳ ಖಾತೆಗಳಿಗೆ ಆಧಾರ್ ಜೋಡಣೆಗೆ ತುರ್ತಾಗಿ ಕ್ರಮವಹಿಸಬೇಕೆಂದು ಡಿಸಿ, ಸಿಇಒ ಸೂಚಿಸಿದರು.
ಶಾಲೆ, ವಸತಿ ನಿಲಯ, ಆಸ್ಪತ್ರೆಗಳಿಗೆ ತಹಸೀಲ್ದಾರ್, ತಾಪಂ ಇಒಗಳು ಕಡ್ಡಾಯವಾಗಿ ಭೇಟಿ ನೀಡಿ, ಫೋಟೋದೊಂದಿಗೆ ವರದಿ ನೀಡಬೇಕು. ಹಾಸ್ಟೆಲ್, ಶಾಲೆಗಳು ಹಾಗೂ ಅಂಗನವಾಡಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಶೇ.100 ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್, ಭೋವಿ, ಅಲ್ಪಸಂಖ್ಯಾತ ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮಗಳ ಅನುದಾನದಲ್ಲಿ ಈಗಾಗಲೇ ಕೊರೆಸಿರುವ ಬೋರ್‌ವೆಲ್‌ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಶಾಲಾ, ಕಾಲೇಜು ಕೊಠಡಿಗಳ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಮಳೆ ಮುಂದುವರೆದಿದ್ದು, ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳ ದುರಸ್ಥಿಗೆ ಅನುದಾನ ನೀಡಲಾಗುವುದು. ಶಿಥಿಲಾವಸ್ಥೆ ಕೊಠಡಿಗಳಲ್ಲಿ ಪಾಠ ಮಾಡಬಾರದೆಂದರು.
ಶಾಲೆಯಿಂದ ಹೊರಗುಳಿದ ಮಕ್ಕಳೇ, ಬಾಲಕಾರ್ಮಿಕರು ಹಾಗೂ ಬಾಲ್ಯವಿವಾಹಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಮನೆ, ಮನೆ ಸಮೀಕ್ಷೆ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕೆಂದು ಸಿಇಒ ಸೂಚಿಸಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೆಶಕ ಬಿ.ಆನಂದ್, ಡಿಡಿಪಿಐ ಎಂ.ಆರ್.ಮಂಜುನಾಥ್, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಬಿಸಿಎಂ ಜಿಲ್ಲಾ ಅಧಿಕಾರಿ ಸುಬ್ರನಾಯ್ಕ ಮತ್ತಿತರ ಅಧಿಕಾರಿಗಳು ಇದ್ದರು.