ಎಂಆರ್​ಬಿಸಿ ಕಚೇರಿಗಳಿಗೆ ಪ್ರವೇಶ ನಿಷೇಧ

25 Dwd 1
Published on

ಧಾರವಾಡ: ಕರೊನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬ ಸುತ್ತಾಡಿದ ಪರಿಣಾಮ ನಗರದ 2 ಸರ್ಕಾರಿ ಕಚೇರಿಗಳ ಅಧಿಕಾರಿ, ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.

ನಗರದಲ್ಲಿ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 28 ವರ್ಷದ ವ್ಯಕ್ತಿ, ಕೋವಿಡ್ ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ. ಆತ ನಗರದ ಜುಬಿಲಿ ವೃತ್ತ ಬಳಿಯ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಕಚೇರಿ ಹಾಗೂ ಜಲಮಂಡಳಿ ಮುಖ್ಯ ಕಚೇರಿ ಆವರಣದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಚೇರಿಗೆ ತೆರಳಿದ್ದ. ಕಾರ್ಯನಿಮಿತ್ತ ಎರಡೂ ಕಚೇರಿಗಳಲ್ಲಿ ಸುತ್ತಾಡಿದ್ದಾನೆ.

ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಒಳಗಾದ ನೌಕರನ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದ್ದು, ಕೋವಿಡ್ ವರದಿ ಇನ್ನೂ ಬಂದಿಲ್ಲ. ಈ ಮಧ್ಯೆ ಆತಂಕಗೊಂಡಿರುವ ಎರಡೂ ಕಚೇರಿಗಳ ಸಿಬ್ಬಂದಿ, ವಿಷಯ ತಿಳಿದು ಗುರುವಾರ ಕಚೇರಿಗಳನ್ನು ಬಂದ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಕಚೇರಿಯತ್ತ ಸುಳಿದಿಲ್ಲ. ಮುಂಜಾಗ್ರತೆ ಕ್ರಮವಾಗಿ ಪಾಲಿಕೆಯಿಂದ ಎರಡೂ ಕಚೇರಿಗಳಿಗೆ ಸ್ಯಾನಿಟೈಸ್ ಮಾಡಲಾಗಿದೆ.

ಕೋವಿಡ್ ವೈರಸ್ ಗುಪ್ತಗಾಮಿನಿಯೇ?

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಪಾಯಕಾರಿ ವಿಷಯ ಎಂದರೆ ಇತ್ತೀಚೆಗೆ ಸಂಪರ್ಕ, ರೋಗ ಲಕ್ಷಣ ಇಲ್ಲದೆ ಸೋಂಕು ಆವರಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಕರೊನಾ ಸೋಂಕು ಗುಪ್ತಗಾಮಿನಿಯಾಗಿದೆಯೇ? ಎನ್ನುವ ಆತಂಕ ಸಾರ್ವಜನಿಕರನ್ನು ಕಾಡಲಾರಂಭಿಸಿದೆ.

ಸೋಂಕಿತರು ಮೊದಲು ಪತ್ತೆಯಾಗುತ್ತಿದ್ದಂತೆ ಟ್ರಾವೆಲ್ ಹಿಸ್ಟರಿ ಸಿಗುತ್ತಿತ್ತು. ಸೋಂಕಿತರ ಮೊದಲ, ಎರಡನೇ ಸಂರ್ಪತರ ಮಾಹಿತಿ ಪಡೆದು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಇದಕ್ಕಾಗಿಯೇ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಿಮ್ಸ್​ನ ಕೆಲ ವೈದ್ಯರ ನೇತೃತ್ವದ ತಂಡ ರಚಿಸಿದ್ದು, ಅವರು ಕಲೆ ಹಾಕುವ ಮಾಹಿತಿ ಆಧರಿಸಿ ಸಂರ್ಪತರ ಪತ್ತೆ ಕಾರ್ಯ ಮಾಡಲಾಗುತ್ತಿತ್ತು. ಈಗ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ‘ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ’ ಎನ್ನುವ ಮಾಹಿತಿ ಜನರ ನಿದ್ದೆಗೆಡಿಸಿದೆ.

ಬೇರೆ ರಾಜ್ಯ, ಜಿಲ್ಲೆಯಿಂದ ಬಂದವರಾಗಿದ್ದರೆ ಕ್ವಾರಂಟೈನ್​ನಲ್ಲಿದ್ದರು ಎನ್ನಬಹುದು. ತೀವ್ರ ಉಸಿರಾಟದ ಸಮಸ್ಯೆ(ಎಸ್​ಎಆರ್​ಐ), ಸಣ್ಣದಾಗಿ ಜ್ವರ-ಕೆಮ್ಮು (ಐಎಲ್​ಐ) ಇದ್ದ ಕೆಲವರಿಗೂ ಸೋಂಕು ದೃಢವಾಗುತ್ತಿದೆ. ಇವರಿಗೆ ಸಂರ್ಪತರನ್ನೂ ಪತ್ತೆ ಹಚ್ಚುವುದು ಸಲೀಸು. ಕೆಲ ಪ್ರಕರಣಗಳಲ್ಲಿ ಸೋಂಕಿತರನ್ನು ಕೇಳಿದರೆ ನಾನು ಯಾರನ್ನೂ ಸಂರ್ಪಸಿಲ್ಲ. ಸೋಂಕುಳ್ಳವರ ಸಂಪರ್ಕ ಮಾಡಿಲ್ಲ. ಹೊರ ರಾಜ್ಯ, ಜಿಲ್ಲೆಗೆ ಹೋಗಿಲ್ಲ ಎಂದು ಇತ್ಯಾದಿ ಹೇಳುತ್ತಿದ್ದಾರೆ. ಇದು ಮತ್ತಷ್ಟು ಆತಂಕ ತರಿಸಿದೆ.

ಸೋಂಕಿತರು, ಅವರು ವಾಸಿಸುವ ಪ್ರದೇಶ ಹೀಗೆ ಪ್ರತಿ ಮಾಹಿತಿಯನ್ನು ಜಿಲ್ಲಾಡಳಿತ ನೀಡುತ್ತಿದೆ. ಹೇಗೆ ಸೋಂಕು ಬಂತು ? ಎಂಬ ಮಾಹಿತಿ ಸಿಕ್ಕರೆ ಜನರು ಜಾಗೃತರಾಗಲು ಅನುಕೂಲವಾಗುತ್ತದೆ. ಅಲ್ಲದೆ ಸೋಂಕು ಹರಡುವುದನ್ನೂ ನಿಯಂತ್ರಿಸಲು ಸಾಧ್ಯ. ಆದರೆ, ಸಂಪರ್ಕ ಇಲ್ಲದೆ ಸೋಂಕು ಹರಡುತ್ತಿದೆ. ಇನ್ನು ಮುಂದೆ ಹೇಗೋ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net