ಎಂ ಸ್ಯಾಂಡ್, ಖಡಿ ಸಾಗಿಸುತ್ತಿದ್ದ 3 ಟಿಪ್ಪರ್ ವಶ

27 lxr 2
Published on

ಲಕ್ಷ್ಮೇಶ್ವರ: ಪರವಾನಗಿ ಇಲ್ಲದೆ ಎಂ ಸ್ಯಾಂಡ್, ಖಡಿ ಸಾಗಿಸುತ್ತಿದ್ದ 3 ಟಿಪ್ಪರ್​ಗಳನ್ನು ಸೋಮವಾರ ಪಟ್ಟಣದಲ್ಲಿ ತಹಸೀಲ್ದಾರರು ವಶಪಡಿಸಿಕೊಂಡಿದ್ದಾರೆ.

ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾತನಾಡಿ, ಪಟ್ಟಣದಲ್ಲಿ ಸಂಚರಿಸುತ್ತಿದ್ದ 3 ಟಿಪ್ಪರ್​ಗಳನ್ನು ಪರಿಶೀಲಿಸಿದಾಗ ಯಾವುದೇ ಪಾಸ್ ಇರಲಿಲ್ಲ. ಟಿಪ್ಪರ್​ಗಳನ್ನು ಪೊಲೀಸ್ ವಶಕ್ಕೆ ನೀಡಿ ಕ್ರಮಕ್ಕೆ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಲೂಕಿನ ಆದ್ರಳ್ಳಿ, ಅಕ್ಕಿಗುಂದ, ನೆಲೂಗಲ್, ದೇವಿಹಾಳ, ನಾದಿಗಟ್ಟಿ ಗುಡ್ಡದ ಸೆರಗಿನಲ್ಲಿ ಇರುವ ಕ್ರಷರ್​ಗಳಿಂದ ಇತ್ತೀಚಿನ ವರ್ಷಗಳಲ್ಲಿ ಎಂ ಸ್ಯಾಂಡ್, ಜಲ್ಲಿಕಲ್ಲು, ಖಡಿ ಸೇರಿ ಕಲ್ಲಿನ ಉತ್ಪನ್ನಗಳು ಹಗಲು-ರಾತ್ರಿ ಸಾಗಾಟವಾಗುತ್ತಿವೆ. ಓವರ್ ಲೋಡ್, ಓವರ್ ಸ್ಪೀಡ್ ಸೇರಿ ಕಾನೂನಿನ ಮಿತಿ ಮೀರಿ ಸಂಚರಿಸುವ ಇವುಗಳ ಅಬ್ಬರಕ್ಕೆ ಜನ ಹೈರಾಣಾಗಿದ್ದಾರೆ. ಆದರೆ, ಕಳೆದ 1 ತಿಂಗಳಿಂದ ಲಾಕ್​ಡೌನ್ ಘೊಷಣೆಯಾದಾಗಿನಿಂದ ಇವುಗಳ ಅಬ್ಬರ ನಿಂತಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ವಿನಾಯಿತಿ ಮತ್ತು ಬಹು ಬೇಡಿಕೆ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ಕ್ರಷರ್​ಗಳ ಕಾರ್ಯ, ಎಂ ಸ್ಯಾಂಡ್ ಸಾಗಿಸುವ ಟಿಪ್ಪರ್​ಗಳ ಸಂಚಾರದ ಅಬ್ಬರ ಪ್ರಾರಂಭವಾಗಿರುವುದು ಜನತೆಯ ನೆಮ್ಮದಿ ಕದಡಿವೆ.

ಪರವಾನಗಿ ಇಲ್ಲದೆ ಎಂ ಸ್ಯಾಂಡ್ ಮತ್ತು ಜಲ್ಲಿಕಲ್ಲು ಸಾಗಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಪೊಲೀಸರು ನಿಗಾವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net