ಎಂ.ಬಿ. ಪಾಟೀಲರ ವಾರ್ಡ್‌ನಲ್ಲೇ ಜೆಡಿಎಸ್ ಗೆಲುವು, ಆಮ್ ಆದ್ಮಿ ಸೋಲು ಅಚ್ಚರಿಯೇನಲ್ಲ !

1667544397004
Published on

ವಿಜಯಪುರ: ರಾಷ್ಟ್ರದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲರ ವಾರ್ಡ್‌ನಲ್ಲಿಯೇ ಜೆಡಿಎಸ್ ಗೆದ್ದಿದೆ, ಇನ್ನು ಪ್ರಪ್ರಥಮ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ ಸೋಲು ಅಚ್ಚರಿಪಡುವಂಥದ್ದೇನಲ್ಲ ಎಂದು ಆ ಪಕ್ಷದ ಜಿಲ್ಲಾ ವಕ್ತಾರ ಡಾ.ಬಿ.ಎಂ. ಬಿರಾದಾರ ಅಭಿಪ್ರಾಯಿಸಿದರು.

ಎಂ.ಬಿ. ಪಾಟೀಲ ರಾಜ್ಯಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆಯೇ ಸ್ಥಾನಗಳು ಬಂದಿಲ್ಲ. ಅವರ ಪ್ರಭಾವ ಗಮನಿಸಿದರೆ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ, ಅವರ ನಿರೀಕ್ಷೆಯೇ ಹುಸಿಯಾಗಿದೆ. ಎಂ.ಬಿ. ಪಾಟೀಲ ಸಹ ತಮ್ಮ ಪಕ್ಷದಲ್ಲಿ ಪ್ರಭಾವ ಸಾಬೀತುಪಡಿಸಬೇಕಾಗುತ್ತದೆ. ಹೀಗಾಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅವರು ಪ್ರಭಾವ ಬೀರಿಲ್ಲ ಎಂಬುದು ಸಾಬೀತಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕರಾದ ಎಂ.ಬಿ. ಪಾಟೀಲ ಮತ್ತು ಬಸನಗೌಡ ಪಾಟೀಲ ಯತ್ನಾಳ ಒಂದೇ ನಾಣ್ಯದ ಎರಡು ಮುಖಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಯಾವಾಗ ಮಾತು ಬಿಡುತ್ತಾರೋ, ಯಾವಾಗ ಮಾತನಾಡುತ್ತಾರೋ ಅವರಿಗೇ ಗೊತ್ತು? ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

ಫಲಿತಾಂಶ ವಿಶ್ಲೇಷಣೆ:

ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ವಿಶ್ಲೇಷಿಸುವುದಾದರೆ ರಾಷ್ಟ್ರೀಯ ಪಕ್ಷಗಳೇ ಹೆಮ್ಮೆ ಪಡುವಂತಿಲ್ಲ. ಬಿಜೆಪಿ ಸ್ಪಷ್ಟ ಬಹುಮತ ಗಳಿಸಲು ಇನ್ನೂ ಒಂದು ಸ್ಥಾನ ಬಾಕಿ ಇದೆ. ಅಲ್ಲದೇ ನಾಗಠಾಣ ಕ್ಷೇತ್ರ ಹೊರತುಪಡಿಸಿ ಬಿಜೆಪಿಗೆ ವಾಸ್ತವದಲ್ಲಿ ಧಕ್ಕಿದ್ದು ಕೇವಲ 9 ಸ್ಥಾನ. ಇನ್ನುಳಿದ ಸ್ಥಾನಗಳಲ್ಲಿ ಮತಗಳ ವಿಭಜನೆಯಾಗಿದೆ. ಇನ್ನು ಕಾಂಗ್ರೆಸ್ ತೀರ ಕಡಿಮೆ ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 1 ಸ್ಥಾನ ಧಕ್ಕಿಸಿಕೊಂಡಿದೆ. ಇಂಥದರಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷ ಜನರ ಮನಸ್ಸಿನಲ್ಲಿ ಛಾಪು ಮೂಡಿಸಿರುವುದು ಸಮಾಧಾನಕರ ಸಂಗತಿ. ಮತದಾರರ ತೀರ್ಪು ಸ್ವಾಗತಿಸುವುದಾಗಿ ತಿಳಿಸಿದ ಬಿ.ಎಂ.ಬಿರಾದಾರ, ಆಮ್ ಆದ್ಮಿ ಪಕ್ಷಕ್ಕೆ ಇದು ಸೋಲು ಎಂದು ನಾವು ಭಾವಿಸುವುದಿಲ್ಲ. ಮೊದಲ ಪ್ರಯತ್ನದಲ್ಲಿಯೇ ಜನರು ನಮಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ನಾಲ್ಕು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದ್ದಾರೆ. ಆದರೆ ಮತಗಳು ವಿಭಜನೆಯಾಗಿದ್ದರಿಂದ ಸೋಲಾಯಿತು ಎಂದರು.

ಪ್ರಚಾರದ ವೇಳೆ ಜನರು ಆಮ್ ಆದ್ಮಿ ಪಕ್ಷದ ಬಗ್ಗೆ ಸಾಕಷ್ಟು ಒಲವು ತೋರಿದ್ದರು. ಆದರೆ ಅದು ಮತವಾಗಿ ಪರಿವರ್ತನೆಯಾಗಲಿಲ್ಲ ಎಂದರು.

ನಗರ ಅಭಿವೃದ್ಧಿ ಆಗಲಿ:

ಶಾಸಕ ಬಸನಗೌಡ ಪಾಟೀಲ ಯತ್ನಾಳರು ನಗರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ಕೇವಲ ಒಂದು ರಸ್ತೆ ತೋರಿಸಿ ಅಭಿವೃದ್ಧಿ ಮಾತನಾಡುತ್ತಿದ್ದಾರೆ. ಇನ್ನುಳಿದ ರಸ್ತೆ ಗಮನಿಸಲಿ. ಸ್ಟೇಶನ್ ರಸ್ತೆ ಹಳ್ಳ ಹಿಡಿದಿದೆ. ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ಎಂದೋ ವಿಶ್ವ ಪ್ರವಾಸಿ ತಾಣವಾಗಬೇಕಿತ್ತು. ಅಭಿವೃದ್ಧಿ ಇಲ್ಲದ ಕಾರಣ ಪ್ರವಾಸಿಗರೇ ಬರುತ್ತಿಲ್ಲ. ಮಲ್ಟಿ ನ್ಯಾಶನಲ್ ಕಂಪನಿಗಳೇ ಬರುತ್ತಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಗಮನ ಹರಿಸುತ್ತಿಲ್ಲ. ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಇನ್ನಾದರೂ ಗಮನ ಹರಿಸಲಿ ಎಂದರು.

ನಗರ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಂಗನಾಳ, ನಗರ ಘಟಕದ ಅಧ್ಯಕ್ಷ ಭೋಗೇಶ ಸೋಲಾಪುರ, ನಿಯಾದಾಹ್ಮದ್ ಗೋಡಿಹಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net