

ಅಥಣಿ, ಬೆಳಗಾವಿ: ಬರದ ನಾಡಿಗೆ ನೀರು ಹರಿಸಿದ ಭಗೀರಥ ಎಂ.ಬಿ ಪಾಟೀಲ ಅವರು ನಾಡಿಗೆ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರ 58ನೇ ಹುಟ್ಟುಹಬ್ಬದ ಅಂಗವಾಗಿ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದ ಅವರು, ವಿಜಯಪುರ ಒಂದು ಕಾಲದಲ್ಲಿ ಬರದ ನಾಡಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯದ ಹಲವು ಭಾಗಗಳ ರೈತರ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿ ವರ್ಷಗಳ ಬೇಡಿಕೆಯಾಗಿದ್ದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೊಳಿಸಿದರು. ಪಕ್ಷ ಅಧಿಕಾರದಲ್ಲಿ ಇರದೆ ಇರುವಾಗಲೂ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಅವರ ರಾಜಕೀಯ ಮತ್ತು ಸಾಮಾಜಿಕ ಸೇವೆ ಉತ್ತರ ಕರ್ನಾಟಕಕ್ಕೆ ಅವಶ್ಯವಾಗಿದೆ ಎಂದರು. ಮುಖಂಡರಾದ ಸುನೀಲ ಸಂಕ, ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಶಿವು ಗುಡ್ಡಾಪೂರ, ಸುರೇಶ ಪಾಟೀಲ, ರಾವಸಾಬ ಐಹೊಳೆ, ಬೀರಪ್ಪ ಯಂಕಚ್ಚಿ, ರವಿ ಬಡಕಂಬಿ, ಮಲ್ಲು ಬುಟಾಳೆ, ಉದಯ ಸೋಳಸಿ, ಗುಂಡು ಇಜಾರಿ, ರಾಹುಲ ಮಾಚಕನೂರ, ಸುನಿತಾ ಐಹೊಳೆ, ಕಲಾವತಿ ಕಿತ್ತೂರ, ವಿಲೀನ ಯಳಮೇಲಿ, ರಮೇಶ ಪವಾರ ಇತರರಿದ್ದರು.