

ಹಾಸನ: ಇದುವರೆಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದ ಮಾಜಿ ಸಚಿವ ಎ. ಮಂಜು ಈಗ ದೇವೇಗೌಡರ ಪಕ್ಷ ಜೆಡಿಎಸ್ ಸೇರುತ್ತಿರುವುದು ಜಿಲ್ಲೆಯ ಜನತೆಗೆ ಬಗೆದ ದ್ರೋಹವಾಗಿದೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯೋಗಾ ರಮೇಶ್ ಟೀಕಿಸಿದರು.
ಪಕ್ಷಾಂತರದಲ್ಲಿ ಪಿಎಚ್‌ಡಿ ಮಾಡಿರುವವರು ಯಾರಾದರು ಇದ್ದರೆ ಅದು ಎ. ಮಂಜು ಮಾತ್ರ. ಮೊದಲು ಬಿಜೆಪಿ, ನಂತರ ಕಾಂಗ್ರೆಸ್, ಮತ್ತೆ ಬಿಜೆಪಿ ಸೇರಿ ಈಗ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಯಾವುದೇ ತತ್ವ ಸಿದ್ಧಾಂತ ಇಲ್ಲದ ಎ. ಮಂಜು ಅಧಿಕಾರಕ್ಕಾಗಿ ಯಾವುದೇ ಅಪವಿತ್ರ ಮೈತ್ರಿಗೆ ಸಿದ್ಧರಿರುತ್ತಾರೆ ಎಂಬುದಕ್ಕೆ ಅವರ ಈಗಿನ ನಡೆಯೇ ಸಾಕ್ಷಿ ಎಂದು ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತೀವ್ರ ಟೀಕಾಪ್ರಹಾರಗೈದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆ ವೇಳೆ ಸೂಕ್ತ ದಾಖಲಾತಿ ಸಲ್ಲಿಸದೆ ಚುನಾವಣಾ ಆಯೋಗದ ನಿಯಮ ಉಲ್ಲಂಘಿಸಿದ್ದಾರೆ ಎಂಬುದಾಗಿ ಆರೋಪಿಸಿ ಅವರ ಆಯ್ಕೆಯನ್ನು ರದ್ದುಗೊಳಿಸಬೇಕು ಎಂದು ಪರಾಜಿತ ಅಭ್ಯರ್ಥಿ ಎ. ಮಂಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಎ. ಮಂಜು ಜೆಡಿಎಸ್ ಸೇರ್ಪಡೆಗೆ ಮುಂದಾಗಿರುವುದರಿಂದ ನ್ಯಾಯಾಲಯದಲ್ಲಿರುವ ಅರ್ಜಿಯ ಸಂಬಂಧ ಜೆಡಿಎಸ್ ಮುಖಂಡರೊಂದಿಗೆ ಒಳ ಒಪ್ಪಂದ ನಡೆದಿರುವ ಸಾಧ್ಯತೆ ಇದೆ ಎಂದು ಯೋಗಾರಮೇಶ್ ಅನುಮಾನ ವ್ಯಕ್ತಪಡಿಸಿದರು.
ಯಾವ ಪಕ್ಷಕ್ಕೂ ನಿಷ್ಟರಾಗಿರದ ಎ. ಮಂಜು ಅವರು ಈಗಿರುವ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಲು ಬಹಳ ಪ್ರಯತ್ನಪಟ್ಟರು. ಆದರೆ ಅಲ್ಲಿ ಅವರನ್ನು ಯಾರೂ ಮೂಸಿ ನೋಡಲಿಲ್ಲ. ಅಂತಹ ಹಳಸಲು ಅನ್ನವನ್ನು ತಿನ್ನಲು ಜೆಡಿಎಸ್ ಹೊರಟಿರುವುದು ಸಹ ಅನುಕೂಲ ಸಿಂಧು ರಾಜಕಾರಣ. ಕೇವಲ ಎರಡು ತಿಂಗಳ ಹಿಂದೆ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಅವರನ್ನು ಸಜ್ಜನ ರಾಜಕಾರಣಿ, ಅವರು ಮುಂದೆ ಮಂತ್ರಿ ಆಗಬೇಕು ಎಂಬುದಾಗಿ ಹೊಗಳಿದ್ದ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಈಗ ಅಂತಹ ಸಜ್ಜನ ರಾಜಕಾರಣಿಯನ್ನು ದೂರ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ಎ. ಮಂಜು ಸಾಧನೆ ಶೂನ್ಯ:
ಹಿಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿರುವ ಎ. ಮಂಜು ಅವರ ಸಾಧನೆ ಶೂನ್ಯ. ಹಿಂದೆ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರಿದ್ದರು. ಎ. ಮಂಜು ಸಚಿವರಾದ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇರುವ ಎರಡೂ ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಅಂತಹ ವ್ಯಕ್ತಿಯನ್ನು ಸೇರಿಸಿಕೊಂಡರೆ ಜೆಡಿಎಸ್‌ಗೆ ಹೆಚ್ಚಿನ ಲಾಭವೇನೂ ಆಗುವುದಿಲ್ಲ. ತಾವು ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಗೆದ್ದುಕೊಂಡ ತೃಪ್ತಿ ಇದೆ ಎಂದರು.
ಎರಡು ಕುಟುಂಬಗಳ ನಡುವಿನ ಜಗಳ:
ಜೆಡಿಎಸ್‌ನ ಎರಡು ಕುಟುಂಬಗಳ ನಡುವಿನ ಶೀತಲ ಸಮರ ರಾಜ್ಯ ರಾಜಕಾರಣವನ್ನು ಹಾಳು ಮಾಡುತ್ತಿದೆ. ಇತ್ತೀಚೆಗಷ್ಟೇ ರಾಮನಗರದ ಸಮಾರಂಭವೊಂದರಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗುವುದಾಗಿ ಬಹಿರಂಗವಾಗಿ ಘೋಷಿಸಿದರು. ಅದೇ ವೇದಿಕೆಯಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ ತುಟಿ ಪಿಟಿಕ್ ಎನ್ನಲಿಲ್ಲ. ಆದರೆ ಹಾಸನದಲ್ಲಿ ತಾನು ಜೆಡಿಎಸ್ ಅಭ್ಯರ್ಥಿ ಆಗುವುದಾಗಿ ಭವಾನಿ ರೇವಣ್ಣ ಹೇಳಿದ ಕೆಲವೇ ಗಂಟೆಗಳಲ್ಲಿ, ‘ಹಾಸನದಲ್ಲಿ ಭವಾನಿ ನಿಲ್ಲುವ ಅಗತ್ಯವಿಲ್ಲ, ಅಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ’ ಎಂಬುದಾಗಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. ಎಚ್.ಡಿ. ಕುಮಾರಸ್ವಾಮಿ ಏನೇ ಹೇಳಿದರೂ ಅವರಿಂದ ಹಾಸನ ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಆಯ್ಕೆ ಮಾಡಲು ಸಹ ಸಾಧ್ಯವಿಲ್ಲ. ಎಲ್ಲವೂ ರೇವಣ್ಣ ಹೇಳಿದಂತೆಯೇ ಇಲ್ಲಿ ನಡೆಯುವುದು ಎಂದು ವ್ಯಂಗ್ಯವಾಡಿದರು.
ಎಟಿಆರ್ ಬಿಜೆಪಿಗೆ ಬರುವುದು ಗೊತ್ತಿಲ್ಲ:
ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಬಿಜೆಪಿ ಸೇರಲು ಪ್ರಯತ್ನಿಸುತ್ತಿರುವ ವಿಷಯ ತಮಗೆ ತಿಳಿದಿಲ್ಲ. ಅವರು ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿಗಳಿವೆ. ಅಲ್ಲದೆ, ಅವರು ಮತ್ತೆ ಸ್ಪರ್ಧಿಸಿದರೆ ಸೋಲನುಭವಿಸುತ್ತಾರೆ ಎಂಬ ಭಯದಿಂದಲೇ ಜೆಡಿಎಸ್ ಅವರಿಗೆ ಟಿಕೆಟ್ ನೀಡದೆ ಹೊರಗಟ್ಟಿದೆ. ಅಂತಹದರಲ್ಲಿ ಸೋಲುವ ಅಭ್ಯರ್ಥಿಗೆ ಯಾವ ಪಕ್ಷ ಟಿಕೆಟ್ ನೀಡಲು ಬಯಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಎಟಿಆರ್ ಬಿಜೆಪಿ ಸೇರಿದರೂ ಮುಂದೆ ವಿಧಾನ ಪರಿಷತ್ ಅಥವಾ ಸಂಸತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಇದೆ. ತಾವಂತೂ ಸದ್ಯಕ್ಕೆ ಅರಕಲಗೂಡು ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಆಗಿರುವುದಾಗಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಸತ್ಯನಾರಾಯಣ, ಶಿವಲಿಂಗಶಾಸ್ತ್ರಿ, ಲೋಕೇಶ್ ಇತರರು ಇದ್ದರು.