ಎ ಫಾರ್ ಅಲ್ಲಮಪ್ರಭು: ಅಭಿನವ ಮೃತ್ಯುಂಜಯ ಶ್ರೀಗಳು

1111111111111111111111111111111
Published on

ಗದಗ:
ಹಾಲಕೆರೆಯ ಲಿಂ. ಡಾ.ಅನ್ನದಾನ ಶ್ರೀಗಳ ಸತ್ಯ ಸಂಕಲ್ಪದಂತೆ ನಗರದ ಮಸಾರಿಯಲ್ಲಿರುವ ಹಾಲಕೆರೆಯ ಶಾಖಾಮಠದಲ್ಲಿ ಆಯೋಜಿಸಿರುವ ಬಸವ ಪುರಾಣ ಎರಡನೇ ದಿನದ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಪ್ರವಚನ ನೀಡಿದ ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೀಗಾಗಿ ಮಕ್ಕಳಿಗೆ ಎ ಫಾರ್ ಆಪಲ್, ಬಿ ಫಾರ್ ಬಾಲ್, ಸಿ ಫಾರ್ ಕ್ಯಾಟ್ ಅಂತ ಕಲಿಸುತ್ತೀರಿ. ಬದಲಾಗಿ ಎ ಫಾರ್ ಅಲ್ಲಮಪ್ರಭು, ಬಿ ಫಾರ್ ಬಸವಣ್ಣ, ಸಿ ಫಾರ್ ಚನ್ನಬಸವಣ್ಣ ಎಂದು ಶರಣ ಪರಂಪರೆ ಕಲಿಸಿದರೆ ಇಂಗ್ಲಿಷ್ ಭಾಷೆ ಕಲಿಕೆಯ ಜತೆಗೆ ಶರಣ ಪರಂಪರೆಯನ್ನೂ ಮಕ್ಕಳಿಗೆ ಪರಿಚಯಿಸಿದಂತಾಗುತ್ತದೆ ಎಂದರು.
ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಶೋಂಧಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದು, ವಚನ ಸಾಹಿತ್ಯವನ್ನು ಇನ್ನಷ್ಟು ಬೆಳೆಸಿ ಪೋಷಿಸಿ ಮಕ್ಕಳಿಗೆ ಕಲಿಸುವ ಜವಾಬ್ದಾರಿ ಪಾಲಕರದ್ದಾಗಿದೆ. ಶರಣರ ವಿಚಾರಧಾರೆ ಅರಿತುಕೊಂಡರೆ ಬದುಕು ಆನಂದಮಯವಾಗಿರುತ್ತದೆ. ದಿನದ 24 ಗಂಟೆಗಳಲ್ಲಿ ಒಂದು ಗಂಟೆಯಾದರೂ ವಚನ ಸಾಹಿತ್ಯ ಅಧ್ಯಯನಕ್ಕೆ ಮೀಸಲಿಡಿ. ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರನ್ನು ಮರೆಯಬಾರದು. ಬಸವಣ್ಣನವರು ಅಸಾಮಾನ್ಯ ಕೆಲಸ ಮಾಡಿದ್ದಾರೆ. ಮನೆಯೊಳಗೆ ಬಂದಿಯಾಗಿದ್ದ ಮಹಿಳೆಯರಿಗೆ ಸಮಾನತೆ ನೀಡಿದ ಮಹಾಪುರುಷರು. ಹೆಣ್ಣು ಗಂಡು ಮಧ್ಯೆ ಇರುವ ಕಂದಕವನ್ನು ತೊಡೆದು ಹಾಕಲು ಶ್ರಮಿಸಿದರು. ತಮ್ಮ ವರ್ತನೆಯಿಂದಲೇ ಜಗತ್ತನ್ನು ಪರಿವರ್ತನೆ ಮಾಡಿದವರು ಜಗಜ್ಯೋತಿ ಬಸವೇಶ್ವರರು ಎಂದರು.
ಪುರಾಣ ಕಾರ್ಯಕ್ರಮದಲ್ಲಿ ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಶ್ರೀಗಳು, ದರೂರ ಸಂಗನಬಸವೇಶ್ವರ ಮಠದ ಕೊಟ್ಟೂರ ಶ್ರೀಗಳು, ನಿರಂಜನ ಪ್ರಭು ದೇವರು ವಿರಕ್ತಮಠ ಕುರುಗೋಡ, ಸಿದ್ಧಲಿಂಗ ದೇವರು ಸೋಮಸಮುದ್ರ, ಮರಿಕೊಟ್ಟೂರ ದೇವರು ಶ್ರೀಧರಗಡ್ಡಿ, ಸಿದ್ಧೇಶ್ವರ ದೇವರು ಬೂದಗುಂಪ, ವಿಶ್ವೇಶ್ವರ ದೇವರು ವ್ಯಾಕರಣನಾಡು, ಆನಂದ ದೇವರು ಹುಣಸ್ಯಾಳ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net