

ಶ್ರೀರಂಗಪಟ್ಟಣ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರು ಮಂಗಳವಾ ಉಮೇದುವಾರಿಕೆ ಸಲ್ಲಿಸಿದರು.
ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಜಮಾವಣೆಗೊಂಡಿದ್ದ ಅಸಂಖ್ಯಾತ ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೃಹತ್ ಮೆರವಣಿಗೆ ಮೂಲಕ ಶ್ರೀರಂಗಪಟ್ಟಣ ಮುಖ್ಯರಸ್ತೆಯಲ್ಲಿ ತಾಲೂಕು ಕಚೇರಿವರೆಗೂ ಆಗಮಿಸಿದರು. ಈ ವೇಳೆ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಬೀಸಿ ದಾರಿಯುದ್ದಕ್ಕೂ ಹೂಮಳೆ ಸುರಿಸಿ ಸಂಭ್ರಮಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮನಕ್ಕೂ ಮೊದಲೇ 2 ನಾಮಪತ್ರಗಳನ್ನು ಸಲ್ಲಿಸಿ ಅರ್ಧ ತಾಸುಗಳ ಕಾಲ ತಾಲೂಕು ಕಚೇರಿಯ ಹೊರಭಾಗದಲ್ಲಿ ಕಾಯುತ್ತಿದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು, ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ ಆಗಮಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡರು. ಬಳಿಕ 2 ಗಂಟೆಗೆ ತಮ್ಮ 3ನೇ ನಾಮಪತ್ರವನ್ನು ಕ್ಷೇತ್ರ ಚುನಾವಣಾಧಿಕಾರಿ ಬಾಬು, ಸಹಾಯಕ ಚುನಾವಣಾಧಿಕಾರಿ ಅಶ್ವಿನಿ ಅವರಿಗೆ ಪತ್ನಿ ಗೀತಾ ರವೀಂದ್ರ ಹಾಗೂ ಜಿಪಂ ಮಾಜಿ ಸದಸ್ಯ ಅರಕೆರೆ ಮರೀಗೌಡ ಅವರೊಂದಿಗೆ ಸಲ್ಲಿಸಿದರು.
ಮಂಡ್ಯ ಜನರಿಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಎಂದಿಗೂ ಮೋಸ ಮಾಡಿಲ್ಲ. ಹಿಂದೆ 9 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಮುಂದಾಗಿದ್ದ ತಮ್ಮ ಸರ್ಕಾರವನ್ನು ಕೆಡವಿದ್ದು ಇದೆ ಕಾಂಗ್ರೆಸ್. ನಮ್ಮ ಪಕ್ಷದ ಬಗ್ಗೆ ಮಾತನಾಡುವವರು ನಮಗೆ ಸರ್ಟಿಫಿಕೇಟ್ ಕೊಡಲ್ಲ, ಮಂಡ್ಯದ ಜನರು ಸರ್ಟಿಫಿಕೇಟ್ ಕೊಡಬೇಕು. 5 ವರ್ಷಗಳ ಕಾಲ ಸ್ವತಂತ್ರಸರ್ಕಾರ ರಚಿಸಲು ಒಂದೊಂದು ಮತವು ಪ್ರಮುಖವಾಗಿದ್ದು, ಈ ಬಾರಿ ಉತ್ತರ ಕರ್ನಾಟಕದಲ್ಲಿ 35 ಸೀಟುಗಳನ್ನು ಗೆಲ್ಲುವ ಭರವಸೆ ಇದೆ. ಮತ್ತೆ ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ 7 ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ತಮಗೆ ಮತ ನೀಡುವಂತೆ ಕಣ್ಣೀರು ಸುರಿಸಿ ಕೆಲವರು ನಾಟಕವಾಡುತ್ತಿದ್ದಾರೆ. ಆದರೆ ಅಂದು ಇವರನ್ನೇ ನಂಬಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬೆನ್ನಿಗೆ ಚೂರಿ ತಿವಿದು ಕಣ್ಣೀರು ಹಾಕುವಂತೆ ಮಾಡಿದ್ದರು. ಈ ಬಗ್ಗೆ ಕ್ಷೇತ್ರದ ಜನರು ಎಚ್ಚರ ವಹಿಸಿ ಎಂದು ಪರೋಕ್ಷವಾಗಿ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಶ್ರೀರಂಗಪಟ್ಟಣಕ್ಕೆ ಹೆಲಿಕಾಪ್ಟರ್ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಿಸಿ, ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನ ಕಡೆಯಿಂದ ಕಾರಿನಲ್ಲಿ ಆಗಮಿಸುವ ವೇಳೆ ಕಾರ್ಯಕರ್ತರು ಘೋಷಣೆ ಕೂಗುತ್ತ ಕಾರಿನ ಕಡೆಗೆ ನುಗ್ಗಿದರು. ಈ ವೇಳೆ ಪೊಲೀಸರು ಕಾರ್ಯಕರ್ತರ ಗುಂಪನ್ನು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಚದುರಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್, ತಾಲೂಕು ಅಧ್ಯಕ್ಷ ಪೈ.ಮುಕುಂದ, ಕಾರ್ಯಧ್ಯಕ್ಷ ನಗುವನಹಳ್ಳಿ ಶಿವಸ್ವಾಮಿ, ನಗರ ಘಟಕದ ಅಧ್ಯಕ್ಷ ಎಂ.ಸುರೇಶ್ ಇತರರು ಉಪಸ್ಥಿತರಿದ್ದರು.