ಎ.ಆರ್.ಕೃಷ್ಣಮೂರ್ತಿ ಅವರಿಗೆ ಅದ್ದೂರಿ ಸ್ವಾಗತ

14kglphoto-1
Published on

ಕೊಳ್ಳೇಗಾಲ: ಕೊಳ್ಳೇಗಾಲ ಕ್ಷೇತ್ರದಲ್ಲಿ ಅಮೋಘ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರಿಗೆ ಶನಿವಾರ ರಾತ್ರಿ ಕೊಳ್ಳೇಗಾಲದಲ್ಲಿ ಸ್ವಾಗತ ಕೋರಲಾಯಿತು.


1,08,363 ಮತಗಳನ್ನು ಪಡೆದು ಪ್ರಚಂಡ ಗೆಲುವು ಸಾಧಿಸಿ ಚಾಮರಾಜನಗರ ಜಿಲ್ಲೆಯಿಂದ ಕಾರಿನಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಎ.ಆರ್.ಕೃಷ್ಣಮೂರ್ತಿ ಅವರನ್ನು ಪಟ್ಟಣದ ಅಚ್ಗಾಳ್ ಯಾತ್ರಿ ನಿವಾಸ್ ವೃತ್ತದಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.


ಕೊಳ್ಳೇಗಾಲಕ್ಕೆ ಎ.ಆರ್.ಕೆ ಆಗಮನಕ್ಕೂ ಮುನ್ನ ಸುಮಾರು 2 ತಾಸು ಕಾದಿದ್ದ ಜನರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಕಾಂಗ್ರೆಸ್ ಪರವಾದ ಜೈಕಾರ ಕೂಗಿದರು. ಕಾಂಗ್ರೆಸ್ ಬಾವುಟ ಹಿಡಿದು ಸಂಭ್ರಮಿಸಿದರು.


ರಾತ್ರಿ 9.30ಕ್ಕೆ ಆಗಮಿಸುತ್ತಿದಂತೆ ಪಟಾಕಿ ಸಿಡಿಸಿ, ಹೂ ಮಳೆಗೈದರು. ಹಾರ ಹಾಕಿ ಸಡಗರ ಸಂಭ್ರಮದಿಂದ ಎ.ಆರ್.ಕೆ ಅವರನ್ನು ಬರ ಮಾಡಿಕೊಂಡರು. ಎ.ಆರ್.ಕೆ ಅವರ ಕೈ ಹಿಡಿದು ಅಭಿನಂದನೆ ಸಲ್ಲಿಸಿದರು. ಸೆಲ್ಫಿ ಹಾಗೂ ಫೋಟೋಗಳಿಗೆ ಮುಗಿಬಿದ್ದರು. ಈ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸುವಲ್ಲಿ ಪಟ್ಟಣ ಪೊಲೀಸರು ಹರಸಾಹಸ ಪಡಬೇಕಾಯಿತು.


ನಂತರ ಹೆದ್ದಾರಿ ರಸ್ತೆಯಲ್ಲಿ ಮೆರವಣಿಗೆ ಮೂಲಕ ತೆರಳಿದ ಎ.ಆರ್.ಕೃಷ್ಣಮೂರ್ತಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನೆರೆದಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ಜನರಿಗೆ ಕೈ ಮುಗಿದು ಧನ್ಯವಾದ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭೆ ಸದಸ್ಯರಾದ ಮಂಜುನಾಥ್, ರಾಘವೇಂದ್ರ, ಶಾಂತರಾಜು ಬಸ್ತೀಪುರ, ಜಿ.ಪಿ.ಶಿವಕುಮಾರ್, ಮುಖಂಡರಾದ ಸೋಮಶೇಖರ್, ಟಿ.ಪಿ.ಬಸವಣ್ಣ, ದಿಲೀಪ್ ಸಿದ್ದಪ್ಪಾಜಿ, ರಾಜೇಂದ್ರ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net