

ದಾವಣಗೆರೆ: ಋತುಮಾನಕ್ಕೆ ಅನುಗುಣವಾಗಿ ಆಹಾರ ಸೇವನೆಯಿಂದ ಯಾವುದೇ ರೋಗಗಳು ಬರುವುದಿಲ್ಲ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಹೇಳಿದರು.
ಬಸವಾಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಸಹಯೋಗದಲ್ಲಿ ಹೊನ್ನಾಳಿ ತಾಲೂಕಿನ ಕುಂಬಳೂರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯವೆಂದರೆ ಕೇವಲ ದೈಹಿಕ ರೋಗಗಳಿಂದ ಮುಕ್ತರಾಗುವುದಲ್ಲ. ಮಾನಸಿಕ ಸದೃಢತೆಯೂ ಅವಶ್ಯಕ. ದೇಹ ಮತ್ತು ಮನಸ್ಸಿನ ಹತೋಟಿಗೆ ಯೋಗ ಸಹಕಾರಿ. ನಿತ್ಯ ದಿನಚರಿ ಪಾಲಿಸಿ ನಿಯಮಿತ ವ್ಯಾಯಾಮ, ಯೋಗ ಮಾಡಿದರೆ ನಿರಂತರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕುಂಬಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯವೇ ಭಾಗ್ಯ, ಅರೋಗ್ಯ ಸರಿಯಾಗಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಹಾಗಾಗಿ, ಎಲ್ಲರೂ ಆರೋಗ್ಯದತ್ತ ಗಮನಕೊಡಬೇಕು ಎಂದರು.
ಸ್ಥಳೀಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಮಾತನಾಡಿದರು. ವೈದ್ಯರಾದ ಡಾ.ಸೌಭಾಗ್ಯ, ಡಾ.ಸೈಯದ್ ಶಂಷುದ್ದೀನ್, ಡಾ.ಸಿದ್ದೇಶ್ ಈ. ಬಿಸನಳ್ಳಿ, ಡಾ.ಡಿ.ಎಸ್.ಪ್ರೀತಿ ಪಾಲ್ಗೊಂಡು ತಪಾಸಣೆ ನಡೆಸಿದರು. ರಾಜಾರಾಮ್ ಇದ್ದರು.
ದಾವಣಗೆರೆ ವಾಸನ್ ಐ ಕೇರ್ ವತಿಯಿಂದ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. 158 ಜನರಿಗೆ ಕಣ್ಣಿನ ಪರೀಕ್ಷೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಯಿತು. 130 ಜನರು ಆರೋಗ್ಯ ತಪಾಸಣೆ ಸದುಪಯೋಗ ಪಡೆದುಕೊಂಡರು.