ಋತುಚಕ್ರದ ಬಗ್ಗೆ ಸಂಕೋಚ ಸಲ್ಲದು

20kglphoto-8
Published on

ಕೊಳ್ಳೇಗಾಲ: ಮುಟ್ಟು ಮೈಲಿಗೆಯಲ್ಲ, ಅಪವಿತ್ರವೂ ಅಲ್ಲ. ಅಂದೊಂದು ಋತುಚಕ್ರ ಪ್ರಕ್ರಿಯೆ. ಅದಿಲ್ಲದಿದ್ದರೆ ಮಾನವನ ಸೃಷ್ಟಿಯೇ ಅಸಾಧ್ಯ ಎಂದು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಕಾವ್ಯಾ ತಿಮ್ಮಯ್ಯ ಅಭಿಪ್ರಾಯಪಟ್ಟರು.


ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮಹಿಳಾ ದೌರ್ಜನ್ಯ ತಡೆ ಸಮಿತಿ ಆಯೋಜಿಸಿದ್ದ ಹೆಣ್ಣುಮಕ್ಕಳಿಗೆ ಋತುಚಕ್ರ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಋತುಚಕ್ರ ಪ್ರಕ್ರಿಯೆ ನಿಸರ್ಗದತ್ತವಾದದ್ದು. ಅದು ಹೆಣ್ಣು ಮಕ್ಕಳಿಗೆ ಮಾತ್ರ ಇರುವ ವಿಶೇಷ ಕೊಡುಗೆ ಎಂದು ಭಾವಿಸಬೇಕು. ಋತುಚಕ್ರದ ಬಗ್ಗೆ ಯಾವುದೇ ಸಂಕೋಚ, ಅಸಹ್ಯ ಮನೋಭಾವನೆ ಬೇಡ ಎಂದು ಹೆಣ್ಣು ಮಕ್ಕಳಿಗೆ ಮನವರಿಕೆ ಮಾಡಿಸಿದರು.


ಪದವಿ ಕಾಲೇಜುಗಳಲ್ಲಿ ಪದವಿ ಪಠ್ಯಕ್ರಮದ ಜತೆಗೆ ಜೀವನದ ಇಂತಹ ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ವಿದ್ಯಾರ್ಥಿನಿಯರಾದ ನೀವುಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು. ಮೊದಲಿನಿಂದಲೂ ಹೆಣ್ಣು ಮಕ್ಕಳಲ್ಲಿ ಪ್ರಕೃತಿದತ್ತವಾಗಿ ಸಹಜವಾಗಿ ನಡೆಯುವ ಋತುಚಕ್ರದ ಬಗ್ಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಮನೆಯ ಕುಟುಂಬದವರಿಗೂ ಅರಿವು ಮೂಡಿಸಬೇಕು ಎಂದರು.


ಕಾಲೇಜಿನ ಪ್ರಾಂಶುಪಾಲೆ ಪ್ರೊ.ಜಯಲಕ್ಷ್ಮೀ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಲತಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಪಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೇಮಕುಮಾರಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net