

ಯಾದಗಿರಿ: ಋತುಚಕ್ರ ಮಹಿಳೆಯರಿಗೆ ಒಂದು ಸಹಜ ಪ್ರಕ್ರಿಯೆಯಾಗಿದ್ದು, ಆ ದಿನಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಿ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಜಿಪಂ ಸಿಇಒ ಗರೀಮಾ ಪನ್ವಾರ ಸಲಹೆ ನೀಡಿದರು.
ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ ಮತ್ತು ಯುನಿಸೆಫ್ನ ಸಹಯೋಗದಲ್ಲಿ ಆಯೋಜಿಸಿದ್ದ ಸುಸ್ಥಿರ ಮುಟ್ಟಿನ ನಿರ್ವಹಣೆ ಕುರಿತು ತರಬೇತಿ ಕಾಯರ್ಾಗಾರ ಉದ್ಘಾಟಿಸಿ, ಮುಟ್ಟಿನ ಕುರಿತು ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದರು.
ಋತುಚಕ್ರದ ದಿನಗಳಲ್ಲಿ ಆಗುವ ದೈಹಿಕ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಏರುಪೇರನ್ನು ನಿಯಂತ್ರಿಸುವುದು ತೀರ ಸುಲಭದ ಮಾತಲ್ಲ. ನೆನಪಿರಲಿ, ಮುಟ್ಟಿನ ದಿನಗಳ ಅನೈರ್ಮಲ್ಯ ಅದೆಷ್ಟೋ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಮುಜುಗರ ಬೇಡ. ಆ ದಿನಗಳಲ್ಲಿ ಮಹಿಳೆಯರು ತಮ್ಮ ಅವಶ್ಯಕತೆಯನ್ನು ನಾಚಿಕೆ ಬಿಟ್ಟು ಹೇಳಿಕೊಳ್ಳಬೇಕು. ಋತುಚಕ್ರದ ದಿನಗಳ ಜಾಗೃತಿ ಅಗತ್ಯ ಇರುವವರಿಗೆ ಸಹಕಾರ ನೀಡಲು ಸಾಕಷ್ಟು ಎನ್ಜಿಓಗಳು ಪ್ರಾರಂಭವಾಗಿವೆ. ಕಡಿಮೆ ಬೆಲೆಯಲ್ಲಿ ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್, ಕಪ್ಗಳನ್ನು ತಯಾರಿಸುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಶೋಭಾರಾಣಿ ಉಪನ್ಯಾಸ ನೀಡಿ, ಮುಟ್ಟಿನ ಹಲವು ಉತ್ಪನ್ನಗಳು ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ಗಳು ರಾಸಾಯನಿಕಗಳನ್ನು ಹೊಂದಿರುತ್ತವೆ. ಅವು ಕಸದಲ್ಲಿ ಹಾಕಿದಾಗ ಹಸುಗಳು ತಿನ್ನುತ್ತವೆ. ಆನಂತರ ಹಾಲಿನ ಮುಖಾಂತರ ನಾವೇ ಸೇವಿಸುವ ಪರಿಸ್ಥಿತಿ ಬರುತ್ತದೆ. ಮಣ್ಣಿನಲ್ಲಿಯೂ ಸಹ ಕೊಳೆಯುದಿಲ್ಲ. ಹೀಗಿರುವಾಗ ಬಳಸಿದ್ದನ್ನು ನಾವೇ ಮುಟ್ಟಲು ಹೇಸಿಗೆ ಪಟ್ಟು ರಸ್ತೆಗೆ ಎಸೆದಾಗ, ಸ್ವಚ್ಚ ಮಾಡುವವರು ಮುಟ್ಟುತ್ತಾರೆಯೇ ಎಂಬ ಬಗ್ಗೆ ಮೊದಲು ನಮ್ಮಲ್ಲಿ ಅರಿವು ಬರಬೇಕು. ಪರಿಸರದ ಮೇಲೆ ಪರಿಣಾಮ ಬೀರದ ಉತ್ಪನ್ನಗಳನ್ನು ಬಳಸಬೇಕು ಎಂದು ಕಿವಿಮಾತು ಹೇಳಿದರು.