ಊರ್ಡಿಗೆರೆ ಕ್ಷೇತ್ರದ ಜಿಪಂ ಸದಸ್ಯ ಹುಚ್ಚಯ್ಯ ರಾಜೀನಾಮೆ

download
Published on

ತುಮಕೂರು : ತಾಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ ಪದಚ್ಯುತಿ ಪ್ರಹಸನ ತಾರಕಕ್ಕೇರಿದೆ. ಮಾದಿಗ ಸಮುದಾಯದ ತನ್ನ ಆಪ್ತರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಆಗದ ಹಿನ್ನೆಲೆಯಲ್ಲಿ ಊರ್ಡಿಗೆರೆ ಜಿಪಂ ಕ್ಷೇತ್ರ ಪ್ರತಿನಿಧಿಸುತ್ತಿರುವ ವೈ.ಎಚ್.ಹುಚ್ಚಯ್ಯ ರಾಜೀನಾಮೆ ಕೊಟ್ಟಿರುವುದು ಬಿಜೆಪಿಯಲ್ಲೀಗ ತಳಮಳ ಸೃಷ್ಟಿಸಿದೆ.

ತಾಪಂನಲ್ಲಿ ಬಿಜೆಪಿ ಪಕ್ಷದ ಆಂತರಿಕ ಅಧಿಕಾರ ಹಂಚಿಕೆ ಸೂತ್ರ ಪ್ರಕಾರ 20:20:20 ತಿಂಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಡುವ ಸೂತ್ರವನ್ನು ಮಾಜಿ ಶಾಸಕ ಬಿ.ಸುರೇಶಗೌಡ, ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ ನೇತೃತ್ವದಲ್ಲಿ ಮಾಡಲಾಗಿತ್ತು. ಅದರಂತೆ ಮೊದಲ ಅವಧಿಗೆ ವಡ್ಡರಹಳ್ಳಿ ಕ್ಷೇತ್ರದ ಗಂಗಾಂಜನೇಯ (ಪರಿಶಿಷ್ಟ ಜಾತಿ) ಹಾಗೂ ಕೆಸರಮಡುವಿನ ಶಾಂತಕುಮಾರ್ (ಬಿಸಿಎಂಎ) ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, 20,40 ಹಾಗೂ 50 ತಿಂಗಳವರೆಗೆ ಗಂಗಾಂಜನೇಯ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದ್ದು ಮಾದಿಗ ಸಮುದಾಯದ ಮುಖಂಡ ವೈ.ಎಚ್.ಹುಚ್ಚಯ್ಯ ಅವರನ್ನು ಕೆರಳಿಸಿದೆ. ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಕ್ಕೆ ಇದು ಕಾರಣವಾಗಿದೆ.

ಸುರೇಶಗೌಡ ವಿರುದ್ಧ ಆಕ್ರೋಶ!: ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ 20 ತಿಂಗಳಿಗೆ ಅಧಿಕಾರಬಿಟ್ಟುಕೊಡಬೇಕಾಗಿದ್ದ ಗಂಗಾಂಜನೇಯ ಅವರನ್ನು 50 ತಿಂಗಳವರೆಗೆ ಮುಂದುವರಿಸಿದ ಸುರೇಶಗೌಡ ವಿರುದ್ಧವೇ ಬಹಿರಂಗ ಅಸಮಾಧಾನ ಹೊರಹಾಕಿರುವ ಹುಚ್ಚಯ್ಯ, ಮಾದಿಗ ಸಮುದಾಯದ ಗ್ರಾಮ ಪಂಚಾಯಿತಿ, ತಾಪಂ ಹಾಗೂ ಜಿಲ್ಲಾ ಪಂಚಾಯಿತಿ ಸದ ಸ್ಯರ ಸಭೆ ನಡೆಸಿ, ನುಡಿದಂತೆ ನಡೆಯದಿದ್ದರೆ ಯಾವ ನಾಯಕರನ್ನೂ ಜನ ನಂಬುವುದಿಲ್ಲ. ಅದಕ್ಕೆ ಬೆಲೆ ತೆರಬೇಕಾದೀತು ಎಂಬ ಎಚ್ಚರಿಕೆ ಸಂದೇಶವನ್ನು ಸಭೆ ಮೂಲಕ ರವಾನಿಸಿದ್ದಾರೆ. ಮೇ 29ಕ್ಕೆ ಗಂಗಾಂಜನೇಯ ಅವರನ್ನು ರಾಜೀನಾಮೆ ನೀಡಲು ಸುರೇಶಗೌಡ ಸೂಚಿಸಿದ್ದರು. ಆ ಸ್ಥಾನಕ್ಕೆ ಅರಕೆರೆ ಕ್ಷೇತ್ರದ ಮಾದಿಗ ಸಮುದಾಯದ ಎನ್.ಇ.ಕವಿತಾ ಅವರನ್ನು ಕೂರಿಸುವ ಸಿದ್ಧತೆ ನಡೆದಿತ್ತು. ಆದರೆ, 5 ದಿನಗಳಾದರೂ ರಾಜೀನಾಮೆ ನೀಡದೆ ಇದ್ದ್ದುದು ಹುಚ್ಚಯ್ಯ ಅವರನ್ನು ಕೆರಳಿಸಿದೆ. ಮಾದಿಗ ಸಮುದಾಯದ ಮುಖಂಡರ ಜತೆ ಸರಣಿ ಸಭೆ ನಡೆಸಿ ಹುಚ್ಚಯ್ಯ ರಾಜೀನಾಮೆ ನೀಡಿ ಬೆದರಿಕೆಯೊಡ್ಡಿದ್ದು ಪಕ್ಷದ ವರಿಷ್ಠರಿಗೆ ಈಗ ನುಂಗಲಾರದ ಬಿಸಿತುಪ್ಪವಾಗಿದೆ.

ಡಿಸಿಗೆ ರಾಜೀನಾಮೆ ಪತ್ರ: ಮೇ 29 ರಂದು ಮಾದಿಗ ಸಮುದಾಯದ ಸದಸ್ಯರ ಜತೆ ಸಭೆ ನಡೆಸಿದ್ದ ವೈ.ಎಚ್.ಹುಚ್ಚಯ್ಯ ಸೋಮವಾರ ಮತ್ತೊಮ್ಮೆ ಸಮುದಾಯದ ಗ್ರಾಪಂ, ತಾಪಂ, ಜಿಪಂ ಸದಸ್ಯರ ಸಭೆ ನಡೆಸಿದ್ದಾರೆ. ಈ ನಡುವೆ ಪಕ್ಷದಲ್ಲಿ ಮಾದಿಗ ಸಮುದಾಯವನ್ನು ಕಡೆಗಣಿಸಿರುವುದರಿಂದ ಬೇಸತ್ತು ಜಿಪಂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡು ಜಿಲ್ಲಾಧಿಕಾರಿಗೆ ರಾಜೀನಾಮೆ ಪತ್ರ ರವಾನಿಸಿರುವುದು ಬಿಜೆಪಿಯಲ್ಲಿ ರಾಜಕೀಯ ತಲ್ಲಣ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net