

ಅರಕಲಗೂಡು: ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಊರೊಡೆಯಪ್ಪನ ದೇವರ ಹಬ್ಬ ಭಕ್ತಿ, ಶ್ರದ್ಧೆಯಿಂದ ಜರುಗಿತು.
ಗ್ರಾಮದ ಕೆರೆಯಿಂದ ಬಾಳೆಹಣ್ಣಿನ ಬುಟ್ಟಿಗಳನ್ನು ಹೊತ್ತು ಹೊರಟ ಗ್ರಾಮಸ್ಥರು ಮಂಗಳವಾದ್ಯದೊಂದಿಗೆ, ದೇವರ ಕಳಸವನ್ನು ಹಿಂಬಾಲಿಸುತ್ತಾ ಊರು ಹೊರಭಾಗದಲ್ಲಿರುವ ದೈವ ಸನ್ನಿಧಿಯನ್ನು ತಲುಪಿದರು. ದೇಗುಲ ತಲುಪಿದ ನಂತರ ದೇವರ ಸುತ್ತ ಕುಳಿತ ಭಕ್ತರ ಗುಂಪು ಬಾಳೆಹಣ್ಣಿನ ನೈವೇದ್ಯವನ್ನು ನೀಡುತ್ತಾ, ಪೂಜೆಯ ನಂತರ ಪರಸ್ಪರ ಬಾಳೆಹಣ್ಣನ್ನು ನೀಡಿ ಭಕ್ತಿ ಅರ್ಪಿಸಿದರು.
ದೇವಾಲಯದ ಆವರಣದಲ್ಲಿ ಕೆಂಡೋತ್ಸವ ನಡೆಯಿತು. ಜಾನುವಾರುಗಳಿಗೆ ಒಳಿತಾಗಲಿ ಎಂಬ ನಂಬಿಕೆಯಿಂದ ಅನೇಕರು ತಮ್ಮ ಮನೆಯಲ್ಲಿನ ರಾಸುಗಳನ್ನು ದೈವದ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಪೂಜೆಯ ವೇಳೆ ಪಠಾಕಿ, ಬಾಣ ಬಿರುಸುಗಳ ಪ್ರದರ್ಶನ ಮನ ಸೆಳೆಯಿತು.
ದಶಕಗಳಿಂದ ಗ್ರಾಮದ ಸಮೀಪವಿರುವ ಹುಣಸೆಮರವನ್ನು ಊರೊಡೆಯಪ್ಪ ದೇವರ ಹೆಸರಿನಲ್ಲಿ ಪೂಜೆ ಮಾಡುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಕಾರ್ಗಲ್ ಗ್ರಾಮವಷ್ಟೇ ಅಲ್ಲದೆ ಸುತ್ತಮುತ್ತಲಿನ ತರಿಗಳಲೆ, ಹೊಡೆನೂರು, ಹೊನಗಾನಹಳ್ಳಿ ಸುತ್ತಲಿನ ಹಳ್ಳಿಗಳ ಜನರು ಪೂಜಾ ಕಾರ್ಯದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.
ಊರೊಡೆಯಪ್ಪ ದೇವರ ವಿಶೇಷವೆಂದರೆ ಗ್ರಾಮಸ್ಥರೆಲ್ಲರೂ ಹಬ್ಬಕ್ಕಿಂತ ಒಂದು ವಾರ ಮುಂಚೆಯೇ ಬಾಳೆಗೊನೆಗಳನ್ನು ಕಡಿದು ನೈಸರ್ಗಿಕವಾಗಿ ಹಣ್ಣುಮಾಡಿ ಅದೇ ಹಣ್ಣಿನಿಂದ ನೈವೇದ್ಯ ನೀಡುವುದಾಗಿದೆ. ವರ್ಷಕೊಮ್ಮೆ ಜರುಗುವ ಹಬ್ಬದಲ್ಲಿ ಮಾತ್ರ ಈ ದೇವರಿಗೆ ಬಾಳೆಹಣ್ಣಿನ ಸಮೇತ ಪೂಜೆಮಾಡುವುದನ್ನು ಹೊರತುಪಡಿಸಿ ವರ್ಷದ ಬೇರಾವುದೇ ದಿನದಲ್ಲಿ ಇಲ್ಲಿ ಪೂಜೆಗೆ ಬಾಳೆಹಣ್ಣನ್ನು ಪೂಜೆಗೆ ಬಳಸುವುದಿಲ್ಲ. ದೇವರಿಗೆ ಹರಕೆಹೊತ್ತ ಭಕ್ತರು ಕೆರೆಯಲ್ಲಿ ಸ್ನಾನಮಾಡಿ ನಾರುಮಡಿಯಲ್ಲಿ ದೇವಾಲಯದವರೆಗೆ ಹಿಮ್ಮುಖವಾಗಿಯೆ ಸಾಗುವುದು ಇಲ್ಲಿನ ವಿಶೇಷವಾಗಿದೆ.