ಅರಕಲಗೂಡು: ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಇತ್ತೀಚೆಗೆ ಊರೊಡೆಯಪ್ಪನ ದೇವರ ಹಬ್ಬ ಭಕ್ತಿ, ಶ್ರದ್ಧೆಯಿಂದ ಜರುಗಿತು. ಗ್ರಾಮದ ಕೆರೆಯಿಂದ ಬಾಳೆಹಣ್ಣಿನ ಬುಟ್ಟಿಗಳನ್ನು ಹೊತ್ತು ಹೊರಟ ಗ್ರಾಮಸ್ಥರು ಮಂಗಳವಾದ್ಯದೊಂದಿಗೆ ದೇವರ ಕಳಸವನ್ನು ಹಿಂಬಾಲಿಸಿ ದೈವ ಸನ್ನಿಧಿಯನ್ನು ತಲುಪಿದರು. ಪೂಜೆಯ ನಂತರ ಪರಸ್ಪರ ಬಾಳೆಹಣ್ಣನ್ನು ನೀಡಿ ಭಕ್ತಿ ಅರ್ಪಿಸಿದರು.
ದೇವಾಲಯದ ಆವರಣದಲ್ಲಿ ಕೊಂಡೋತ್ಸವ ನಡೆಯಿತು. ರಾಸುಗಳನ್ನು ದೈವದ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಬಾಣ ಬಿರುಸುಗಳ ಪ್ರದರ್ಶನ ಗಮನ ಸೆಳೆಯಿತು. ಗ್ರಾಮದ ಸಮೀಪವಿರುವ ಹುಣಸೆಮರವನ್ನು ದಶಕಗಳಿಂದ ಊರೊಡೆಯಪ್ಪ ದೇವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತಿದೆ. ಸುತ್ತಮುತ್ತಲಿನ ತರಿಗಳಲೆ, ಹೊಡೆನೂರು, ಹೊನಗಾನಹಳ್ಳಿ ಸುತ್ತಲಿನ ಹಳ್ಳಿಗಳ ಜನರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಗ್ರಾಮಸ್ಥರು ಹಬ್ಬಕ್ಕಿಂತ ಒಂದು ವಾರ ಮೊದಲು ಬಾಳೆಗೊನೆಗಳನ್ನು ಕಡಿದು ನೈಸರ್ಗಿಕವಾಗಿ ಹಣ್ಣುಮಾಡಿ ಅದರಿಂದ ನೈವೇದ್ಯ ಮಾಡುತ್ತಾರೆ. ಈ ಹಬ್ಬ ಹೊರತುಪಡಿಸಿ ವರ್ಷದ ಬೇರಾವುದೇ ದಿನದಲ್ಲಿ ಇಲ್ಲಿ ಪೂಜೆಗೆ ಬಾಳೆಹಣ್ಣನ್ನು ಬಳಸುವುದಿಲ್ಲ. ದೇವರಿಗೆ ಹರಕೆಹೊತ್ತ ಭಕ್ತರು ಕೆರೆಯಲ್ಲಿ ಸ್ನಾನಮಾಡಿ ನಾರುಮಡಿಯಲ್ಲಿ ದೇವಾಲಯದವರೆಗೆ ಹಿಮ್ಮುಖವಾಗಿ ಸಾಗುವುದು ಇಲ್ಲಿನ ವಿಶೇಷವಾಗಿದೆ.