

ಗದಗ: ಕರೊನಾ ವೈರಸ್ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಹೇರಲಾಗಿರುವ ಲಾಕ್ಡೌನ್ನಿಂದ ರೈತ ಸಮೂಹ ತೀವ್ರ ತೊಂದರೆಗೆ ಒಳಗಾಗಿದ್ದು, ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಿಸುವುದು, ಮಾರಾಟ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಹಿದೆ. ಅನೇಕ ರೈತರು ಕೈಗೆ ಬಂದ ಉತ್ಪನ್ನ ನಾಶ ಮಾಡುವುದು, ಸುಟ್ಟು ಹಾಕುವ ಕಾರ್ಯ ಇಂದಿಗೂ ನಡೆದಿದೆ. ಆದರೆ, ಲಾಕ್ಡೌನ್ ಸಮಯವನ್ನು ಸವಾಲಾಗಿ ಸ್ವೀಕರಿಸಿದ ಕಲ್ಲಂಗಡಿ ಬೆಳೆದ ರೈತರೊಬ್ಬರು ಊರೂರು ತಿರುಗಿ ಕಲ್ಲಂಗಡಿ ಮಾರಾಟ ಮಾಡಿ ಸಾವಿರಾರು ರೂ. ಸಂಪಾದನೆ ಮಾಡಿದ್ದಾರೆ.
ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರು ಗ್ರಾಮದ ರೈತ ವೆಂಕನಗೌಡ ಪಾಟೀಲ ಅವರು ತಾವು ಬೆಳೆದ ಕಲ್ಲಂಗಡಿ ಮಾರಾಟ ಮಾಡುವುದು ಹೇಗೆ ಎಂಬ ಚಿಂತೆ ಆರಂಭದಲ್ಲಿ ಅವರನ್ನು ಕಾಡಿತು. ಆದರೆ, ಇದಕ್ಕೆ ಧೃತಿಗೆಡದೆ ಶಿರಹಟ್ಟಿ ತೋಟಗಾರಿಕೆ ಇಲಾಖೆ ಸಹಾಯದ ಮೂಲಕ ಬರೋಬ್ಬರಿ 14.5 ಟನ್ ಕಲ್ಲಂಗಡಿ ಮಾರಾಟ ಮಾಡಿ 1.28 ಲಕ್ಷ ರೂ. ಗಳಿಸಿದ್ದಾರೆ.
ವೆಂಕನಗೌಡ ಪಾಟೀಲ ಅವರು ತಮ್ಮ 2.5 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಏ. 1ಕ್ಕೆ 1.5 ಟನ್ ಕಲ್ಲಂಗಡಿ ಕಟಾವು ಮಾಡಿದರು. ಆದರೆ, ಎಲ್ಲವೂ ಲಾಕ್ಡೌನ್ ಆಗಿದ್ದರಿಂದ ಖರೀದಿ ಮಾಡಲು ಏಜೆಂಟರು ಬರಲಿಲ್ಲ. ಇದರಿಂದ ದಿಕ್ಕು ತೋಚದಂತಾಗಿ ರೈತ ತೋಟಗಾರಿಕೆ ಇಲಾಖೆ ಸಂರ್ಪಸಿದ್ದಾರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕಂಬಾರ ಅವರು ರೈತನಿಗೆ ಧೈರ್ಯ ಹೇಳಿ ಲಾಕ್ಡೌನ್ ಇರುವುದರಿಂದ ಖರೀದಿ ಮಾಡಲು ಏಜೆಂಟರು ಬರುವುದಿಲ್ಲ. ಬೆವರು ಸುರಿಸಿ ಬೆಳೆದ ಫಲಸನ್ನು ನಾಶ ಮಾಡುವುದು ಸರಿಯಲ್ಲ. ಗ್ರಾಮಗಳಿಗೆ ತೆರಳಿ ಕಲ್ಲಂಗಡಿ ಮಾರಾಟ ಮಾಡಲು ವಾಹನಕ್ಕೆ ಅನುಮತಿ ಕೊಡಿಸಲಾಗುವುದು. ಊರೂರು ಸುತ್ತಿ ಮಾರಾಟ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಉಪಾಯ ಹೇಳಿದರಲ್ಲದೆ, ವಾಹನ ಸಂಚಾರಕ್ಕೆ ಅನುಮತಿಯನ್ನೂ ಕೊಡಿಸಿದ್ದಾರೆ.
ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಕೇವಲ 10 ದಿನಗಳಲ್ಲಿ 14.5 ಟನ್ ಕಲ್ಲಂಗಡಿ ಮಾರಾಟ ಮಾಡಿದ್ದಾರೆ. 2.5 ಎಕರೆ ಕಲ್ಲಂಗಡಿಗೆ ಬೆಳೆಯಲು ಬೀಜ ಗೊಬ್ಬರ ಇತರೆ ಸೇರಿ 63 ಸಾವಿರ ರೂ. ಖರ್ಚಾಗಿತ್ತು. ಒಟ್ಟು ಸಂಪಾದನೆಯಲ್ಲಿ ಖರ್ಚು ತೆಗೆದರೆ 65 ಸಾವಿರ ರೂ. ನಿವ್ವಳ ಲಾಭ ಗಳಿಸಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ರೈತ ಉತ್ತಮ ಹಣ ಸಂಪಾದನೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
ಲಾಕ್ಡೌನ್ ಎಂದು ಮನೆಯಲ್ಲಿ ಕುಳಿತಿದ್ದರೆ ಇಲ್ಲವೇ ಹತಾಶೆಗೊಂಡು ಬೆಳೆಯನ್ನು ಹಾಳು ಮಾಡಿಕೊಂಡರೆ ರೈತರಿಗೆ ಹಾನಿಯಾಗುತ್ತದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಪರ್ಯಾಯ ಉಪಾಯ ಹಾಗೂ ಆಲೋಚನೆ ಮಾಡುವುದು ಒಳಿತು.
ಲಾಕ್ಡೌನ್ ಇದೆ ಎಂದು ರೈತರು ತಾವು ಬೆಳೆದ ಹಣ್ಣು, ತರಕಾರಿಯನ್ನು ನಾಶ ಮಾಡುವುದು ಸರಿಯಲ್ಲ. ಸ್ವತಃ ರೈತರೇ ತಮ್ಮೂರು, ತಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಮಾರಾಟ ಮಾಡಿದರೆ ಉತ್ತಮ ಲಾಭ ಸಿಗಲಿದೆ. ಹೀಗಾಗಿ ರೈತರು ಧೃತಿಗೆಡಬಾರದು. | ಸುರೇಶ ಕುಂಬಾರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಶಿರಹಟ್ಟಿ
ಮೂರು ತಿಂಗಳು ಕಷ್ಟಪಟ್ಟು ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದೆವು. ಇನ್ನೇನು ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿಯೇ ಎಲ್ಲವೂ ಬಂದ್ ಆಗಿದ್ದರಿಂದ ತುಂಬಾ ಹೆದರಿಕೆ ಆಗಿತ್ತು. ದೇವರು ದೊಡ್ಡವನು ಶಿರಹಟ್ಟಿ ತೋಟಗಾರಿಕೆ ಅಧಿಕಾರಿಗಳ ಸಹಕಾರದಿಂದ ಸ್ವಂತ ವಾಹನದ ಮೂಲಕ ಊರೂರು ಸುತ್ತಿ ಕಲ್ಲಂಗಡಿ ಮಾರಾಟ ಮಾಡಲಾಯಿತು. ಬೆಳೆಗೆ ಮಾಡಿದ ಖರ್ಚು ತೆಗೆದು ಲಾಭವೂ ಬಂದಿತು. | ವೆಂಕನಗೌಡ ಪಾಟೀಲ, ರೈತ ತೆಗ್ಗಿನಭಾವನೂರು