ಊರು, ತೇರು, ನೀರು ಎಲ್ಲರಿಗೂ ಬೇರು

Shivanna
Published on

ಚಿತ್ರದುರ್ಗ: ಊರು, ತೇರು, ನೀರು ಪ್ರತಿಯೊಬ್ಬರಿಗೂ ಬೇರಾಗಿದ್ದು, ಜೀವನಾಡಿಯಾಗಿರುವ ಅದರ ಮಹತ್ವ ‘ಕರಟಕ-ದಮನಕ’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಉಣಬಡಿಸುವ ಪ್ರಯತ್ನ ಮಾಡಲಾಗಿದೆ ಎಂದು ನಟ ಶಿವರಾಜ್‌ಕುಮಾರ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದ್ಯೋಗ ಅರಸಿ ಅನ್ಯ ರಾಜ್ಯ-ವಿದೇಶಗಳಿಗೆ ಹೋದರೂ ಹುಟ್ಟಿದ ಊರು, ಬೆಳೆದ ಮನೆಯಲ್ಲಿ ಸಿಗುವ ಅನುಭವ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಅಲ್ಲದೆ, ನಮ್ಮೂರಿಗೆ ನಾವೇನು ಮಾಡಿದ್ದೇವೆ ಎಂಬುದು ಮುಖ್ಯ. ಎಲ್ಲರೊಟ್ಟಿಗೆ ಸೇರಿ ಆಚರಿಸುವ ತೇರು ನೀಡುವ ಸಂತೋಷಕ್ಕೆ ಪಾರವಿಲ್ಲ ಎಂದರು.

ಮಳೆಯಾಗದ ಬರ ಪರಿಸ್ಥಿತಿಯಲ್ಲಿ ನೀರು ಎಷ್ಟು ಮುಖ್ಯ ಎಂಬುದನ್ನು ಆಧಾರವಾಗಿಟ್ಟುಕೊಂಡು ಕೂಡ ಕಥೆ ಎಣೆಯಲಾಗಿದೆ. ಚಿತ್ರದ ಕೆಲ ಸನ್ನಿವೇಶಗಳು ನೀರಿನ ಸಮಸ್ಯೆಯನ್ನು ಬಿಂಬಿಸುತ್ತವೆ. ಕುಡಿಯಲು, ಸ್ನಾನಕ್ಕೂ ಪರಿತಪಿಸುವಂತ ಸ್ಥಿತಿ ಈಗಾಗಲೇ ಹಲವೆಡೆ ನಿರ್ಮಾಣವಾಗಿದೆ. ಹೀಗಾಗಿ ಜೀವಜಲ ಉಳಿಸುವಲ್ಲಿ ನಮ್ಮ ಪಾತ್ರವೇನು ಎಂಬುದನ್ನು ಕೂಡ ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾದ ಪ್ರಭುದೇವ ಅವರ ಸಮನಾಗಿ ಡ್ಯಾನ್ಸ್ ಮಾಡುವುದು ಹೇಗೆ ಎಂಬ ಪ್ರಶ್ನೆ ನನ್ನಲ್ಲೂ ಮೂಡಿದ್ದುಂಟು. ಆದರೆ, ಅವರೇ ನಿಮ್ಮ ಶೈಲಿಯಲ್ಲೇ ಮಾಡಿ. ಆಗ ಅದರ ತೂಕ ಹೆಚ್ಚಲಿದೆ ಎಂದು ಪ್ರೋತ್ಸಾಹಿಸಿದರೂ ಹೀಗಾಗಿ ಇಬ್ಬರದು ಚೆನ್ನಾಗಿಯೇ ಬಂದಿದೆ. ತಮಾಷೆಯಾಗಿ ಆರಂಭವಾಗುವ ಸಿನಿಮಾ ಕಥೆ ನಂತರ ಬೇರೆ-ಬೇರೆ ತಿರುವು ಪಡೆಯುತ್ತದೆ ಎಂದು ತಮ್ಮ ಅನುಭವ ವಿವರಿಸಿದರು.

ನಿರ್ದೇಶಕ ಯೋಗರಾಜ್ ಭಟ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಬಸವೇಶ್ವರ ಚಿತ್ರಮಂದಿರದ ಮಾಲೀಕ ಮಧು, ಗೋಪಾಲಸ್ವಾಮಿ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net