ಊಟ ಬಿಟ್ಟು ವಿದ್ಯಾರ್ಥಿಗಳ ಪ್ರತಿಭಟನೆ

3-3
Published on

ಬೆಳಗಾವಿ: ಸದಾಶಿವನಗರದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್​.ಅಂಬೇಡ್ಕರ್​ ಮೆಟ್ರಿಕ್​ ನಂತರದ ವಸತಿ ನಿಲಯದಲ್ಲಿ ನುಸಿ, ಜಿರಳೆ ಮಿಶ್ರಿತ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬುಧವಾರ ಊಟ ತ್ಯಜಿಸಿ, ತಟ್ಟೆ ಬಾರಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನುಸಿ ಮಿಶ್ರಿತ ಇಡ್ಲಿ, ಸಾಂಬಾರು, ಚಪಾತಿ, ಪಲ್ಯದ ಪಾತ್ರೆಗಳನ್ನಿಟ್ಟು ವಿದ್ಯಾರ್ಥಿಗಳು ವಸತಿ ನಿಲಯದ ಆವರಣದಲ್ಲಿ ಪ್ರತಿಭಟಿಸಿದರು. 300ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ವಸತಿ ನಿಲಯದಲ್ಲಿ ಅಡುಗೆ ಕೋಣೆಯಲ್ಲಿರುವ ಗೋದಾಮಿನ ತುಂಬ ನುಸಿಗಳು, ಜಿರಳೆಗಳಿವೆ. ಇಂತಹ ಆಹಾರ ಕೊಡಬೇಡಿ ವಿಷ ಕೊಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆಗಮಿಸಿ, ವಸತಿ ನಿಲಯದ ಅಡುಗೆ ಕೋಣೆ, ಗೋದಾಮು ಸೇರಿ ವಸತಿ ನಿಲಯದ ಅವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಬಳಿಕ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ನಿವಾರಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಊಟ ಸೇವಿಸಿದರು. ಮಕ್ಕಳಿಗೆ ನಿತ್ಯ ಗುಣಮಟ್ಟದ ಆಹಾರ ಪೂರೈಸುವಂತೆ ವಸತಿ ನಿಲಯದ ಸಿಬ್ಬಂದಿ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net