ಉಸ್ತುವಾರಿ ಸಚಿವರಿಂದ ಪರಿಹಾರ ವಿತರಣೆ

27KDR2 web
Published on

ಕಡೂರು: ಅಂಗಾಂಗ ದಾನ ಮಾಡಿದ ಸೋಮನಹಳ್ಳಿ ತಾಂಡಾದ ಬಾಲಕಿ ರಕ್ಷಿತಾಬಾಯಿ ಮನೆಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ರೂ., ತಾಂಡಾ ಅಭಿವೃದ್ಧಿ ನಿಗಮದ ಒಂದು ಲಕ್ಷ ರೂ, ವೈಯಕ್ತಿಕವಾಗಿ ಎರಡು ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಚೆಕ್ ವಿತರಿಸಿ ಸಾಂತ್ವನ ಹೇಳಿದರು. ಸುದ್ದಿಗಾರರೊಂದಿಗೆ ಸಚಿವ ಭೈರತಿ ಬಸವರಾಜ್ ಮಾತನಾಡಿ, ಮಗಳು ಶಾಶ್ವತವಾಗಿ ದೂರವಾಗುತ್ತಾಳೆಂಬುದು ಗೊತ್ತಿದ್ದರೂ ಆಕೆಯ ಅಂಗಾಂಗ ದಾನದಿಂದ ಒಂಬತ್ತು ಜನರಿಗೆ ಬದುಕಲು ಅವಕಾಶ ಮಾಡಿಕೊಟ್ಟ ರಕ್ಷಿತಾಬಾಯಿ ಪಾಲಕರು ಮಾದರಿಯಾಗಿದ್ದಾರೆ. ಮಾನವೀಯತೆಯ ಜ್ವಲಂತ ನಿದರ್ಶನ ಇದಾಗಿದೆ ಎಂದರು.

ಸರ್ಕಾರದಿಂದ ದೊರಕಿರುವ ಪರಿಹಾರವನ್ನು ವಿದ್ಯಾರ್ಥಿನಿಯ ಕುಟುಂಬಕ್ಕೆ ವಿತರಿಸಲಾಗಿದೆ. ಕೆಎಸ್​ಆರ್​ಟಿಸಿಯಿಂದ 50 ಸಾವಿರ ರೂ. ವಿತರಿಸಿದ್ದು, ಇನ್ನೂ 2.5 ಲಕ್ಷ ರೂ. ಪರಿಹಾರ ನೀಡಲಿದ್ದಾರೆ. ಕುಟುಂಬಸ್ಥರು, ಗ್ರಾಮದ ಹಿರಿಯರು ಬೇಡಿಕೆಗಳನ್ನು ಇಟ್ಟಿದ್ದು, ಮನವಿಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಸಾಧ್ಯವಾಗಬಹುದಾದ ಎಲ್ಲ ಸಹಾಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net